ಪ್ರಾಕೃತಿಕ ವಿಕೋಪ ಬೇಡವೆಂದು ಇಗ್ಗುತ್ತಪ್ಪನ ಮೊರೆ ಹೋದ ಜಿ.ಪಂ ಸದಸ್ಯರು

August 12, 2020

ಮಡಿಕೇರಿ ಆ. 12 : ಕೊಡಗಿನಲ್ಲಿ ಮುಂದೆ ಯಾವುದೇ ಪ್ರಕೃತಿ ದುರಂತ ಸಂಭವಿಸದಿರಲಿ. ವರುಣ ಶಾಂತನಾಗಿ ಜನತೆ ಸುರಕ್ಷಿತವಾಗಿರಲು ದೇವರ ಅನುಗ್ರಹವಿರಲಿ ಎಂದು ಸಂಕಲ್ಪಿಸಿ ಕೊಡಗು ಜಿಲ್ಲಾ ಪಂಚಾಯಿತಿಯ ಸದಸ್ಯರು ಕೊಡಗಿನ ಆರಾಧ್ಯದೈವ ಶ್ರೀ ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಜಿ.ಪಂ. ಸದಸ್ಯರಾದ ಬಿ.ಎನ್. ಪ್ರತ್ಯು, ಮುಕೋಂಡ ವಿಜು ಸುಬ್ರಮಣಿ, ಸಿ.ಕೆ.ಬೋಪಣ್ಣ ಮತ್ತು ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ಕಕ್ಕಬ್ಬೆ ಸಮೀಪವಿರುವ ಶ್ರೀ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳಿ ಕೊಡಗಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಪ್ರಕೃತಿ ವಿಕೋಪದ ದುರಂತಗಳು ಸಂಭವಿಸುತ್ತಿದೆ. ಇದರಿಂದ ಅಮೂಲ್ಯವಾದ ಮನುಷ್ಯನ ಜೀವಕ್ಕೂ ಹಾನಿಯಾಗುತ್ತಿದೆ. ಅಲ್ಲದೆ  ಜಾನುವಾರುಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ದುರಂತಕ್ಕೆ ಬಲಿಯಾಗುತ್ತಿದೆ. ನೂರಾರು ಜನರು ತಮ್ಮ ಮನೆ ಮತ್ತು ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಜನತೆ ಕಣ್ಣೀರಿನ ಬದುಕು ಸಾಗಿಸುವಂತಾಗಿದೆ. ಆದ್ದರಿಂದ ಈ ರೀತಿಯ ದುರಂತಗಳು ಮುಂದೆಂದೂ ಮರುಕಳಿಸಬಾರದು ಎಂದು ಜಿಲ್ಲಾ ಪಂಚಾಯತಿ ಸದಸ್ಯರು ದೇವರಲ್ಲಿ ಮೊರೆಯಿಟ್ಟು ಪ್ರಾರ್ಥಿಸಿದರು.
ಬಿರುಸಿನಿಂದ ಬೀಳುತ್ತಿದ್ದ ಮಳೆ ಕಡಿಮೆಯಾಗಿ ವರುಣ ಕೃಪೆ ತೋರಬೇಕು. ಈ ಮೂಲಕ ನಾಡಿನ ಜನ ಸುರಕ್ಷಿತವಾಗಿರಬೇಕು. ಜನರ  ಕೃಷಿ ಕಾರ್ಯಗಳಲ್ಲ ಯಶಸ್ವಿಯಾಗಿ ನೆರವೇರಿ ನಾಡಿಗೆ ಸುಭಿಕ್ಷೆ ದೊರೆಯುವಂತಾಗಲಿ ಎಂದು ಇದೇ ವೇಳೆ ಈ ಸದಸ್ಯರು ಪ್ರಾರ್ಥನೆ ಮಾಡಿಕೊಂಡರು. ಅಲ್ಲದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ಸೋಂಕು ಕೂಡಲೇ ನಿರ್ಮೂಲನೆಯಾಗಿ ಜನರ ಆತಂಕ ದೂರವಾಗಲಿ ಎಂದು ಕೂಡ ಇವರು ಶ್ರೀ ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. 
ನಂತರ ಈ ಕುರಿತು ಮಾತನಾಡಿರುವ ಬಿ.ಎನ್. ಪ್ರತ್ಯು ಮತ್ತು ವಿಜು ಸುಬ್ರಮಣಿ ಅವರು, ಕೊಡಗಿನ ಜನರು ಪಾರಂಪರಿಕವಾಗಿ ಪ್ರಕೃತಿಯನ್ನು ನಂಬಿಕೊಂಡು ಗೌರವಿಸುತ್ತಾ ಬಂದವರಾಗಿದ್ದಾರೆ. ಅಲ್ಲದೆ ಪ್ರಕೃತಿಯೆ ದೇವರು ಎಂಬ ವಿಶ್ವಾಸ ಕೊಡಗಿನ ಜನರಲ್ಲಿ ಅಚಲವಾಗಿದೆ. ಪ್ರಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಆರಾಧಿಸುತ್ತಾ ಬಂದಿರುವ ಇಲ್ಲಿನ ಜನತೆ, ಇವೆರಡನ್ನು ತಮ್ಮ ಬದುಕಿನ ಒಂದು ಭಾಗ ಎಂದು ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗಿಗೆ ಒಳಿತಾಗಲಿ ಮತ್ತು ಮುಂದೆಂದೂ ಪ್ರಕೃತಿ ಮುನಿಸಿಕೊಳ್ಳದಿರಲಿ ಎಂಬ ಸಂಕಲ್ಪದೊಂದಿಗೆ ಶ್ರೀ ಇಗ್ಗುತ್ತಪ್ಪನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಪ್ರಧಾನ ಅರ್ಚಕರಾದ ಕುಶಭಟ್, ಅರ್ಚಕರಾದ ಶ್ರೀಕಾಂತ್ ಹೆಬ್ಬಾರ್,  ದೇವಸ್ಥಾನದ ಪಾರುಪತ್ಯಗಾರರಾದ  ಪರದಂಡ ಪ್ರಿನ್ಸ್ ತಮ್ಮಪ್ಪ ಅವರು ಉಪಸ್ಥಿತರಿದ್ದರು.

error: Content is protected !!