ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಳ : ಯಶಸ್ವಿಯಾಗಿ ಎದುರಿಸಲು ಕೊಡಗು ಜಿಲ್ಲಾಡಳಿತ ಸಜ್ಜು

12/08/2020

ಮಡಿಕೇರಿ ಆ. 12 : ಕೋವಿಡ್19 ಕ್ಕೆ ಸಂಬಂಧಿಸಿದಂತೆ ಮುಂದಿನ 15 ದಿನಗಳಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ರಾಜ್ಯಾದ್ಯಂತ ಹೆಚ್ಚಾಗಲಿರುವುದಾಗಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ರಾಜ್ಯ ಕೋವಿಡ್ ವಾರ್ ರೂಮ್ ನಿಂದ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಅದರಂತೆ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ಮಾಹೆಯ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್ ಮಾಹೆಯ ಮೊದಲ ವಾರದಲ್ಲಿ ಕೋವಿಡ್ ಸೋಂಕು ಗರಿಷ್ಠ ಮಟ್ಟಕ್ಕೆ ಏರಲಿದ್ದು, ಸೋಂಕಿತ ಪ್ರಕರಣಗಳು ಹೆಚ್ಚಾಗಲಿದೆ.

ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಲಿರುವ ಸೋಂಕು ಪ್ರಕರಣಗಳನ್ನು ಯಶಸ್ವಿಯಾಗಿ ಎದುರಿಸಲು ಜಿಲ್ಲಾಡಳಿತ ಈ ಕೆಳಗಿನಂತೆ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

• ಜಿಲ್ಲೆಯಲ್ಲಿ ಗಂಟಲು/ಮೂಗು ದ್ರವ ಮಾದರಿಗಳ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ.

• ಕೋವಿಡ್ ಸೋಂಕು ಸಂಬಂಧ ಹೆಚ್ಚಾಗಿ ಕಣ್ಗಾವಲು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

• ಕೋವಿಡ್ ಆಸ್ಪತ್ರೆಯಲ್ಲಿ 250 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಈ ಪೈಕಿ 155 ಹಾಸಿಗೆಗಳಿಗೆ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ಸೌಲಭ್ಯವಿರುತ್ತದೆ.

• 56 ಹಾಸಿಗೆಗಳ ಸಾಮರ್ಥ್ಯದ ಐ.ಸಿ.ಯು ಘಟಕವನ್ನು ಸಜ್ಜುಗೊಳಿಸಲಾಗಿದೆ

• ಈ ಪೈಕಿ ಕೋವಿಡ್ ಸೋಂಕಿತ ರೋಗಿಗಳಿಗೆ ಡಯಾಲಿಸಿಸ್ ನಡೆಸಲು ಐ.ಸಿ.ಯು ಘಟಕದಲ್ಲಿ ಎರಡು ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅಲ್ಲದೆ 06 ಹಾಸಿಗೆಗಳನ್ನು ಕೋವಿಡ್ ಸೋಂಕಿತ ನವಜಾತ ಶಿಶು ಮತ್ತು ಮಕ್ಕಳ ಆರೈಕೆಗಾಗಿ ಮೀಸಲಿಡಲಾಗಿದೆ.

• ಕೋವಿಡ್ ಸೋಂಕಿತ ವ್ಯಕ್ತಿಗಳಿಗಾಗಿ ಪ್ರತ್ಯೇಕ ಕೋವಿಡ್ ಶಸ್ತ್ರಚಿಕಿತ್ಸಾ ಘಟಕವನ್ನು ವ್ಯವಸ್ಥೆ ಮಾಡಲಾಗಿದೆ.

• ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಒಟ್ಟು 35 ವೆಂಟಿಲೇಟರ್ ಗಳಿದ್ದು, ಈ ಪೈಕಿ 26 ವೆಂಟಿಲೇಟರ್ ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮತ್ತು 02 ವೆಂಟಿಲೇಟರ್ ಗಳನ್ನು ಕೋವಿಡ್ ಸೋಂಕಿತ ನವಜಾತ ಶಿಶು ಮತ್ತು ಮಕ್ಕಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ.