ಬೆಂಗಳೂರು ಗಲಭೆಗೆ ಖಂಡನೆ : ಮಡಿಕೇರಿಯಲ್ಲಿ ಪ್ರತಿಭಟನೆ

12/08/2020

ಮಡಿಕೇರಿ ಆ.12 : ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಮತಾಂಧರ ದಾಂಧಲೆ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಅವರ ನೆರೆಯ ಹಿಂದೂಗಳ ಮೇಲಿನ ದಾಳಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.

ಅಪರಾಹ್ನ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷದ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಸಂಘ ಪರಿವಾರದ ವಿವಿಧ ಸಂಘಟನೆಗಳ ಕಾರ್ಯಕರ್ತರು ಎಸ್‍ಡಿಪಿಐ ಹಾಗೂ ಪಿಎಫ್‍ಐ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮತಾಂಧರ ಗಡಿಪಾರಿಗೆ ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ ಮಾತನಾಡಿ ನಮ್ಮನ್ನು ಕಾಯುವ ಪೊಲಿಸರಿಗೇ ರಕ್ಷಣೆ ಇಲ್ಲದಂತಾಗಿದೆ. ದೇಶದಲ್ಲಿದ್ದುಕೊಂಡು ಸಮಾಜ ಒಡೆಯುವ ಮತಾಂಧರು ದೇಶ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.

ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್, ಜಿಲ್ಲಾ ವಿದ್ಯಾರ್ಥಿ ಪ್ರಮುಖ ವಿನಯ್ ಕುಮಾರ್, ನಗರ ಸಂಯೋಜಕ ಮನು ರೈ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್, ಬಜರಂಗದಳದ ನಗರ ಸಹ ಸಂಯೋಜಕ ದುರ್ಗೇಶ್, ಡಿ. ಹೆಚ್. ಮೇದಪ್ಪ, ಸತ್ಯ ಕರ್ಕೇರ, ಪಿ. ಎಂ. ರವಿ, ಉಮೇಶ್ ಸುಬ್ರಮಣಿ ಮತ್ತಿತರರು ಹಾಜರಿದ್ದರು.