ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಮಡಿಕೇರಿ ತಾಲ್ಲೂಕಿನಲ್ಲಿ ಶೇ.81.53 ಫಲಿತಾಂಶ

ಮಡಿಕೇರಿ ಆ.12(ಕರ್ನಾಟಕ ವಾರ್ತೆ):-2019-20 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ಮಡಿಕೇರಿ ತಾಲೂಕಿನ ವಿವಿದ ಆಡಳಿತ ಮಂಡಳಿಯ 43 ಶಾಲೆಗಳ ಒಟ್ಟು 1808 (ಬಾಲಕರು -808, ಬಾಲಕಿಯರು -920) ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 1474 (ಬಾಲಕರು-687, ಬಾಲಕಿಯರು -787) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರತೀ ವರ್ಷದಂತೆ ಈ ವರ್ಷವೂ ಬಾಲಕಿಯರೇ ಶೇಕಡವಾರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ತಾಲೂಕಿನ ಶೇಕಡಾವಾರು ಫಲಿತಾಂಶ ಶೇ.81.53 ಪಡೆದಿದ್ದು, ಹಿಂದಿನ ವರ್ಷದ ಫಲಿತಾಂಶಕ್ಕಿಂತ ಉತ್ತಮವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಮಕ್ಕಂದೂರು ಸ.ಪ್ರೌ ಶಾಲೆ, ಗಾಳಿಬೀಡು ಸ.ಪ್ರೌ ಶಾಲೆ, ಚೆರಂಬಾಣೆ ಶ್ರೀ ರಾಜರಾಜೇಶ್ವರಿ ಶಾಲೆ, ಸಿದ್ದಾಪುರ ಇಕ್ರಾ ಪಬ್ಲೀಕ್ ಶಾಲೆ, ಸಿದ್ದಾಪುರ ಶ್ರೀ ಕೃಷ್ಣ ವಿದ್ಯಾ ಮಂದಿರ, ಸಿದ್ದಾಪುರ ಸಂತ ಅನ್ನಮ ಪ್ರೌಢಶಾಲೆ, ಕೋರಂಗಾಲ ಜ್ಞಾನೋದಯ ಶಾಲೆ, ಮಡಿಕೇರಿ ಶ್ರೀ ರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಗಳು ಶೇ.100 ರಷ್ಟು ಪಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕಡಗದಾಳು ಶಾಲೆ ಶೇ.94.74, ಹಾಕತ್ತೂರು ಶೇ.91.43, ಚೆಂಬು ಶಾಲೆ ಶೇ.90.32, ಫಲಿತಾಂಶ ಪಡೆದುಕೊಂಡಿವೆ. ಅನುದಾನಿತ ಶಾಲೆಗಳಲ್ಲಿ ಭಾರತಿ ಪ್ರೌಢಶಾಲೆ, ಮರಗೋಡು ಶೇ.97.56, ಸೆಂಟ್ ಜೋಸೆಫ್ ಶೇ.95.29, ಸೆಂಟ್ ಮೈಕೆಲ್ ಮಡಿಕೇರಿ ಶೇ.94.20 ಫಲಿತಾಂಶ ಪಡೆದುಕೊಂಡಿವೆ. ಅನುದಾನ ರಹಿತ ಶಾಲೆಗಳಲ್ಲಿ ಜ್ಞಾನಜ್ಯೋತಿ ಎಜುಕೇಷನ್ ಟ್ರಸ್ಟ್ ಮೂರ್ನಾಡು ಶೇ.97.22, ಬ್ಲಾಸಂ ಶಾಲೆ ಮಡಿಕೇರಿ ಶೇ.92.31, ಶ್ರೀರಾಂ ಟ್ರಸ್ಟ್ ನಾಪೋಕ್ಲು ಶೇ.92.16 ಫಲಿತಾಂಶ ಪಡೆದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಚೆರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಶ್ರೀವತ್ಸ ಎಂ.ಕೆ 616 ಅಂಕಗಳನ್ನು ಗಳಿಸುವುದರೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಸಿದ್ದಾಪುರ ಶ್ರೀ ಕೃಷ್ಣ ವಿದ್ಯಾ ಮಂದಿರ ಶಾಲೆಯ ವಿದ್ಯಾರ್ಥಿನಿ ರಶ ಷರೀನ್ 615 ಅಂಕಗಳನ್ನು ಗಳಿಸುವುದರೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನ ಹಾಗೂ ಸಂತ ಜೋಸೆಫರ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಪಿಕಾ ಎ.ಆರ್ 612 ಅಂಕಗಳನ್ನು ಗಳಿಸುವುದರೊಂದಿಗೆ ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಪ್ರಸ್ತುತ ವರ್ಷ ಶಾಲೆಗಳ ಗುಣಾತ್ಮಕ ಫಲಿತಾಂಶದ ಆಧಾರದ ಮೇಲೆ ಶಾಲೆಗಳಿಗೆ ಗ್ರೇಡ್ ನೀಡಲಾಗಿದೆ. ಅದರನ್ವಯ ತಾಲೂಕಿನ 22 ಶಾಲೆಗಳು ಎ ಗ್ರೇಡ್, 07 ಶಾಲೆಗಳು ಬಿ ಗ್ರೇಡ್ ಹಾಗೂ 14 ಶಾಲೆಗಳು ಸಿ ಗ್ರೇಡ್ ಪಡೆದಿವೆ ಎಂದು ಅವರು ವಿವರಿಸಿದ್ದಾರೆ.
ಕೋವಿಡ್-19 ರ ಸಾಂಕ್ರಾಮಿಕ ರೋಗದ ಆತಂಕದ ನಡುವೆಯೂ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿದ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೂ, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ವೃದ್ದಿಸಿದ ಶಿಕ್ಷಕ ವೃಂಧದವರಿಗೂ, ಆಡಳಿತ ಮಂಡಳಿಯವರಿಗೂ ಹಾಗೂ ಪೋಷಕರಿಗೂ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
