ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಆ.12 : ಪ್ರಸಕ್ತ(2020-21) ಸಾಲಿನಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ನೇರಸಾಲ ಯೋಜನೆ, ಮೈಕ್ರೋ ಕ್ರೆಡಿಟ್ (ಪ್ರೇರಣಾ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ), ಸಮಗ್ರ ಗಂಗಾ ಕಲ್ಯಾಣ, ಭೂ ಒಡೆತನ, ಅರಣ್ಯ ಆಧಾರಿತ ಆದಿವಾಸಿ ಮತ್ತು ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜನಾಂಗದವರಿಗಾಗಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ. ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ ಕನಿಷ್ಟ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 18 ವರ್ಷದಿಂದ 60 ವರ್ಷದೊಳಗಿನ ವಯೋಮಾನದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ ರೂ.1,50,000 ಹಾಗೂ ನಗರ ಪ್ರದೇಶದವರಿಗೆ ರೂ. 2 ಲಕ್ಷ ಮಿತಿಯೊಳಗಿರಬೇಕು. ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು. ಅರ್ಜಿದಾರರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು. ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ ಪರಿಶಿಷ್ಟ ಪಂಗಡದ ಅಂಗವಿಕಲ ಫಲಾನುಭವಿಗಳ ಲಭ್ಯವಿರುವ ಪಟ್ಟಿಯಿಂದ ಅಂಗವಿಕಲರನ್ನು ನೇರವಾಗಿ ಸಂದರ್ಶನ ಮಾಡಿ ಶೇ.5ರಷ್ಟು ಮೀಸಲಾತಿಯನ್ನು ನೀಡಿ ಸೌಲಭ್ಯ ಕಲ್ಪಿಸಲಾಗುವುದು.
ವಾಹನಗಳಿಗೆ ಸೌಲಭ್ಯ ಪಡೆಯಲು ಫಲಾಪೇಕ್ಷಿಗಳು ವಾಹನ ಚಾಲನಾ ಪರವಾನಗಿ ಬ್ಯಾಡ್ಜ್‍ನ್ನು ಹೊಂದಿರಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಕನಿಷ್ಟ 1.20 ಎಕರೆಯಿಂದ ಗರಿಷ್ಟ 5 ಎಕರೆ ಜಮೀನು ಹೊಂದಿದ ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು. ಭೂ ಒಡೆತನ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಪರಿಶಿಷ್ಟ ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು. ಮತ್ತು ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು.
ಅರ್ಜಿದಾರರು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಗುರುತಿನ ಚೀಟಿ, ಆಧಾರ್ ಕಾರ್ಡ್, ಅರ್ಜಿದಾರರು ಹೊಂದಿರುವ ಬ್ಯಾಂಕ್ ಉಳಿತಾಯ ಖಾತೆಯ ಬ್ಯಾಂಕ್ ಪುಸ್ತಕದ ಮೊದಲ ಪುಟದ ಪ್ರತಿ. ಯೋಜನಾ ವರದಿ, ದರಪಟ್ಟಿ, ಬಾಡಿಗೆ ಕರಾರು ಪತ್ರ(ಅನ್ವಯವಾಗು ಘಟಕಗಳಿಗೆ), ವಾಹನವಾಗಿದ್ದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪಡೆದ ವಾಹನ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್‍ನ ಪ್ರತಿ ಹಾಗೂ 50 ವರ್ಷದೊಳಗಿರುವ ಬಗ್ಗೆ ದೃಡೀಕರಣ ಪತ್ರ, ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಚಾಲ್ತಿ ಪಹಣಿ(ಆರ್‍ಟಿಸಿ) ಮತ್ತು ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿಯನ್ನು ವೆಬ್‍ಸೈಟ್ ವಿಳಾಸ https://kmvstdcl.karnataka.gov.in ಗಳಲ್ಲಿ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್, 31 ರೊಳಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲಾ ಪಂಚಾಯತ್ ನೂತನ ಕಟ್ಟಡ, 1ನೇ ಮಹಡಿ, ಮಡಿಕೇರಿ, ಕೊಡಗು ಜಿಲ್ಲೆ-571201 ದೂ.ಸಂ : 9741999571, 9108813845, 9481388527 ನ್ನು ಸಂಪರ್ಕಿಸಬಹುದು ಎಂದು ಅನಿನಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
