ಬೆಳೆಗಾರರ ಸಾಲ ಮನ್ನಾಕ್ಕೆ ಸರ್ಕಾರಕ್ಕೆ ಶಿಫಾರಸ್ಸು : ಸೋಮವಾರಪೇಟೆ ತಾ.ಪಂ ನಿರ್ಣಯ

12/08/2020

ಸೋಮವಾರಪೇಟೆ ಆ.12 : ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಸರಕಾರ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ತಾಲ್ಲೂಕು ಪಂಚಾಯಿತಿ ವಿಶೇಷ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಕೃತಿ ವಿಕೋಪ ಪರಿಹಾರ ಕ್ರಮ ಹಾಗೂ ಮಳೆಹಾನಿ ಮಾಹಿತಿ ಕುರಿತ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಂಡುಸರಕಾರಕ್ಕೆ ಕಳಿಸುವಂತೆ ತೀರ್ಮಾನಿಸಲಾಯಿತು.
ಮಳೆಹಾನಿ ಕಾಮಗಾರಿಗಳ ಪಟ್ಟಿಯನ್ನು ತಯಾರಿಸುವಾಗ ತಾಲೂಕು ಪಂಚಾಯಿತಿ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸಭೆಯಲ್ಲಿ ನಡೆಯಿತು.
ಮಳೆಹಾನಿ ರಸ್ತೆಗಳ ಬಗ್ಗೆ ತಾ.ಪಂ ಸದಸ್ಯರಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಆದರೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್‍ಗಳು ಹಾಗೂ ಗುತ್ತಿಗೆದಾರರು ಸೇರಿಕೊಂಡು ಕಾಮಗಾರಿಗಳ ಪಟ್ಟಿಗಳನ್ನು ತಯಾರಿಸಲಾಗುತ್ತಿದೆ. ಸದಸ್ಯರಾಗಿ ನಾವೇಕೆ ಇರಬೇಕು. ರಾಜೀನಾಮೆ ಕೊಟ್ಟು ಹೋಗೋಣ ಬಿಡಿ ಎಂದು ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಸದಸ್ಯರಾದ ಬಿ.ಬಿ.ಸತೀಶ್, ಧರ್ಮಪ್ಪ, ತಂಗಮ್ಮ ಅವರುಗಳು ಇಂಜಿನಿಯರ್ ಕೀರ್ತನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆ ಹಾನಿ ಪಟ್ಟಿಗೆ, ಇನ್ನು ಕಾಮಗಾರಿಗಳನ್ನು ಸೇರಿಸುವ ಅವಕಾಶವಿದೆ. ಒಟ್ಟು 211 ಕಿ.ಮೀ.ರಸ್ತೆ ಕಾಮಗಾರಿಗೆ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ ಎಂದು ಇಂಜಿನಿಯರ್ ಕೀರ್ತನ್ ಹೇಳಿದರು. ನಂತರ ಪಟ್ಟಿಯನ್ನು ಪಡೆದು ಉಪಾಧ್ಯಕ್ಷರು ಪರಿಶೀಲಿಸಿ, ರಸ್ತೆಗಳ ಹೆಸರನ್ನು ಓದಿ ಹೇಳಿ. ಇದೆಲ್ಲಾ ಗುತ್ತಿಗೆದಾರರು ಕೊಟ್ಟಿರುವ ಪಟ್ಟಿಯಾಗಿದೆ ಎಂದು ಹೇಳಿದರು. ತಾ.ಪಂ ಸದಸ್ಯರುಗಳು ಕೊಡುವ ಹಾನಿ ವಿವರಗಳನ್ನು ಪಟ್ಟಿಯಲ್ಲಿ ಸೇರಿಸುವಂತೆ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಇಂಜಿನಿಯರ್‍ಗೆ ಸೂಚಿಸಿದರು.
ಮಳೆಹಾನಿ ಪರಿಹಾರದ ಹೆಚ್ಚಿನ ಹಣವನ್ನು ಪಡೆದು, ಅಭಿವೃದ್ಧಿಗೆ ಉಪಯೋಗಿಸುವ ಜವಾಬ್ದಾರಿ ಲೋಕೋಪಯೋಗಿ ಇಲಾಖೆಯ ಎಇಇ ಮೋಹನ್ ಕುಮಾರ್ ಅವರಿಗೆ ಇದೆ. ಕೂಡಲೆ ಕಾರ್ಯಪ್ರವೃತರಾಗಬೇಕು ಎಂದು ಉಪಾಧ್ಯಕ್ಷರು ಹೇಳಿದರು.
ಹಾನಗಲ್‍ಶೆಟ್ಟಳ್ಳಿ ಯಡೂರು ಮಾರ್ಗದ ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಅಗತ್ಯ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಸದಸ್ಯೆ ತಂಗಮ್ಮ ಹೇಳಿದರು. ಮುಖ್ಯ ರಸ್ತೆ ನಿರ್ವಹಣೆ ಹಾಗೂ ಬದಿಯಲ್ಲಿನ ಕಾಡು ಕಡಿಸುವಂತೆ ಸದಸ್ಯ ಸತೀಶ್ ಹೇಳಿದರು. ಜಡಿ ಮಳೆಯಲ್ಲಿ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಅಭಿಮನ್ಯು ಕುಮಾರ್ ಎಇಇಗೆ ತಿಳಿಸಿದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಜನಪ್ರತಿನಿಧಿಗಳ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೊವೀಡ್ ಹಾಗೂ ಮಳೆಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಸರಕಾರದ ಸೌಲಭ್ಯಗಳು ಸಿಗಬೇಕು. ಒಂದಷ್ಟು ನಿಯಮಗಳನ್ನು ಸರಳೀಕರಿಸಿ ಸೌಲಭ್ಯ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಈ ಕೆಲಸವನ್ನು ಅಧಿಕಾರಿ ಮಾಡುತ್ತಿಲ್ಲ ಎಂದು ಸದಸ್ಯರಾದ ತಂಗಮ್ಮ, ಸಬಿತಾ ಚನ್ನಕೇಶವ ದೂರಿದರು. ಈ ಬಗ್ಗೆ ಶಾಸಕರಿಗೆ ದೂರು ನೀಡಲಾಗುವುದು ಎಂದು ಉಪಾಧ್ಯಕ್ಷರು ಹೇಳಿದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ.ವಿಜು, ತಹಶೀಲ್ದಾರ್ ಗೋವಿಂದ ರಾಜು, ಕಾರ್ಯನಿರ್ವಹಣಾಧಿಕಾರಿ ಸುನಿಲ್ ಉಪಸ್ಥಿತರಿದ್ದರು.