ಸೋಮವಾರಪೇಟೆ ಮಳೆಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ

12/08/2020

ಸೋಮವಾರಪೇಟೆ ಆ.12 : ತಾಲ್ಲೂಕಿ ನ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿರುವ ಸ್ಥಳಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಶುಂಠಿ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯ ಬದಿಯಲ್ಲಿ ಬರೆಕುಸಿತವಾಗಿರುವದನ್ನು ವೀಕ್ಷಿಸಿದ ರಂಜನ್, ಮಳೆಹಾನಿ ಪರಿಹಾರದಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಅಭಿಯಂತರರಿಗೆ ಸೂಚಿಸಿದರು.
ಮಳೆಯಿಂದಾಗಿ ವಾಸಕ್ಕೆ ಅಯೋಗ್ಯವಾಗಿರುವ ಮನೆಗಳಿಗೆ ಹೆಚ್ಚಿನ ಪರಿಹಾರ ಒದಗಿಸಲಾಗುವದು. ಕಂದಾಯ ಇಲಾಖೆಯವರು ವಾಸ್ತವಾಂಶವನ್ನು ವರದಿ ಮಾಡಬೇಕು. ಸರಕಾರದಿಂದ ಸಂತ್ರಸ್ಥರಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವದು ಎಂದು ಶಾಸಕರು ತಿಳಿಸಿದರು.
ಬಸವನಕೊಪ್ಪ ರಸ್ತೆಯನ್ನು 80 ಲಕ್ಷ ವೆಚ್ಚದಲ್ಲಿ ಸರ್ವಋತು ರಸ್ತೆಯನ್ನಾಗಿ ಡಾಂಬರೀಕರಣ ಮಾಡಲಾಗಿದೆ. ಸೇತುವೆ ಬದಿಯಲ್ಲಿ ತಡೆಗೋಡೆ ನಿರ್ಮಿಸಲು 10 ಲಕ್ಷ ವಿನಿಯೋಗಿಸಲಾಗಿದೆ. ಇದರೊಂದಿಗೆ ಬಸವನಕೊಪ್ಪ ರಸ್ತೆಯನ್ನು ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯ ಕುಶಾಲಪ್ಪ, ತಾಲೂಕು ತಹಸೀಲ್ದಾರ್ ಗೋವಿಂದರಾಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.