ಗಲಭೆಕೋರರ ಆಸ್ತಿ ಜಪ್ತಿಗೆ ನಿರ್ಧಾರ

ಬೆಂಗಳೂರು ಆ.13 : ಬೆಂಗಳೂರು ಹಿಂಸಾಚಾರಕ್ಕೆ ಸಂಬಂಧಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಆಸ್ತಿ ನಷ್ಟ ಮಾಡಿದ ಗಲಭೆಕೋರರ ಆಸ್ತಿ ಜಪ್ತಿ ಮಾಡುವುದಾಗಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮುಸ್ಲಿಂ ಸಮುದಾಯ ವಿರುದ್ಧದ ಫೇಸ್ ಬುಕ್ ಪೋಸ್ಟ್ ಸಂಬಂಧ ಬೆಂಗಳೂರಿನಲ್ಲಿ ಹಿಂಸಾಚಾರ ನಡೆದಿದ್ದು ಪೊಲೀಸರ ವಾಹನ, ಕಾರುಗಳು, ಬೈಕ್ ಗಳು ಸೇರಿದಂತೆ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಸವರಾಜ ಬೊಮ್ಮಾಯಿ ಅವರು ಅಪಾರ ಆಸ್ತಿಗಳಿಗೆ ಬೆಂಕಿ ಹಚ್ಚಿದ ಗಲಭೆಕೋರರಿಂದಲೇ ವಸೂಲಿ ಮಾಡುವುದಾಗಿ ಹೇಳಿದ್ದಾರೆ.
ಬೆಂಗಳೂರಿನ ಕಾವಲ್ ಭೈರಸಂದ್ರ, ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ನೂರಾರು ಸಂಖ್ಯೆಯಲ್ಲಿ ಪುಂಡರು ಬೀದಿಗಿಳಿದಿದ್ದು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದರು.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ನವೀನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಹಚ್ಚಿದ್ದರು.
ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. 60 ಪೊಲೀಸರಿಗೆ ಗಾಯಗಳಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
