ಎನ್ಕೌಂಟರ್ ನಲ್ಲಿ ನಾಲ್ವರು ನಕ್ಸಲರು ಬಲಿ

13/08/2020

ಸುಕ್ಮಾ ಆ.13 : ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ಭದ್ರತಾ ಪಡೆಗಳು ನಾಲ್ಕು ಮಂದಿ ನಕ್ಸಲರನ್ನು ಹೊಡೆದುರುಳಿಸಿದ ಘಟನೆ ನಡೆದಿದೆ.
ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯ ಹೊರವಲಯದ ಜಗರಗುಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಎನ್ಕೌಂಟರ್ ನಡೆದಿದ್ದು, ಘಟನೆಯಲ್ಲಿ ನಾಲ್ಕು ಮಂದಿ ನಕ್ಸಲರು ಹತರಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‍ಜಿ), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‍ಪಿಎಫ್) ಮತ್ತು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಪಡೆಗಳ ಸಿಬ್ಬಂದಿಗಳು ತೊಡಗಿದ್ದರು ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಜನರಲ್ (ಬಸ್ತಾರ್ ) ಸುಂದರ್ ರಾಜ್ ಪಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಫುಲಂಪಾರ್ ಗ್ರಾಮದಲ್ಲಿ ಸೇನಾಪಡೆಗಳು ಗಸ್ತು ತಿರುಗುತ್ತಿದ್ದಾಗ ಅಲ್ಲಿಯೇ ಬಿಡಾರ ಹೂಡಿದ್ದ ನಕ್ಸಲರು ಏಕಾಏಕಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಈ ವೇಳೆ ನಾಲ್ಕು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ.