ಪುರಾಣ ಪ್ರಸಿದ್ಧ ಪ್ರವಾಸಿ ತಾಣ ಬಿಳಿಗಿರಿರಂಗನ ಬೆಟ್ಟ

ಬಿಳಿಗಿರಿರಂಗನ ಬೆಟ್ಟಮೈಸೂರಿನಿಂದ 120 ಕಿ.ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ , ಸಮುದ್ರ ಮಟ್ಟದಿಂದ 1552 ಮೀಟರ್ ಎತ್ತರದಲ್ಲಿದೆ, ಚಾಮರಾಜನಗರ ಹಾಗೂ ಯಳಂದೂರು ಮಾರ್ಗವಾಗಿ ಸುಮಾರು 15 ಕಿ.ಮೀ. ದೂರದಲ್ಲಿರುವ ಶ್ರೀರಂಗನಾಥನ ನೆಲೆವೀಡು ಬಿಳಿಗಿರಿ ರಂಗನ ಬೆಟ್ಟ, ಪುರಾಣ ಪ್ರಸಿದ್ಧ ಸ್ಥಳ.
ಪ್ರವಾಸಿ ತಾಣ :
ಬಿಳಿಗಿರಿರಂಗನ ಬೆಟ್ಟ ಸುಂದರ ಪ್ರವಾಸಿ ತಾಣವೂ ಹೌದು. ಇದು ವನ್ಯಮೃಗಗಳ ಬೀಡು, ಶ್ರೀರಂಗನಾಥನ ನೆಲೆವೀಡು ಬಿಳಿಗಿರಿರಂಗನಬೆಟ್ಟವನ್ನು ಶ್ವೇತಾದ್ರಿ ಬಿಳಿಕಲ್ಲು ಬೆಟ್ಟ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಇದೊಂದು ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು 700ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ.
ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು 200ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಈ ದೇವಾಲಯವು ಬಹಳ ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿದ್ದಾಗಿದ್ದು, ದ್ರಾವಿಡ ಶೈಲಿಯಲ್ಲಿದೆ.
ಇಲ್ಲಿನ ಆಧಿದೇವತೆ ಶ್ರೀ ಬಿಳಿಗಿರಿರಂಗನಾಥ ಹಾಗೂ ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರದ ಹಾಗೂ ತಿರುಚನಾಪಳ್ಳಿಯ ಶ್ರೀರಂಗ, ವೆಂಕಟೇಶ ಅಣ್ಣತಮ್ಮಂದಿರು ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆಯಾದರೂ ಯುಗಾದಿ ಕಳೆದ ನಂತರ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ.
ಈ ಸಂದರ್ಭ ನಡೆಯುವ ಬ್ರಹ್ಮರಥೋತ್ಸವವನ್ನು ನೋಡಲು ಸಹಸ್ರಾರು ಮಂದಿ ನೆರೆಯುತ್ತಾರೆ. ಈ ಸಂದರ್ಭ ಸ್ವಾಮಿಗೆ ಪಾದುಕೆ ಅರ್ಪಿಸಲಾಗುತ್ತದೆಯಲ್ಲದೆ, ಈ ಪಾದುಕೆಯಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಪ್ರತೀತಿ. 16 ಕಿ.ಮೀ.ನಷ್ಟು ಉದ್ದದವರೆಗೆ ಹಬ್ಬಿರುವ ಬಿಳಿಗಿರಿರಂಗನ ಬೆಟ್ಟ ಶ್ರೇಣಿಯ ನೋಟವೇ ಸುಂದರ.
ಹೆಸರಿನ ಐತಿಹ್ಯ :
ಈ ಕ್ಷೇತ್ರಕ್ಕೆ ಬಿಳಿಗಿರಿ ಎಂದು ಹೆಸರು ಬರಲು ಬೆಟ್ಟದಲ್ಲಿ ಬಿಳಿಯ ಬಣ್ಣದ ಶಿಲೆಗಳಿರುವುದೇ ಕಾರಣ. ಈ ಬೆಟ್ಟವನ್ನು ಜನಪದರು ಬಿಳಿಕಲ್ಲು ಬೆಟ್ಟ ಎಂದರೆ, ಪಂಡಿತರು ಶ್ವೇತಾದ್ರಿ ಎಂದೂ ಕರೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಉಲ್ಲೇಖಿಸಲಾಗಿದೆ. 5,091 ಅಡಿ ಎತ್ತರದ ನಿಸರ್ಗರಮಣೀಯವಾದ ಬೆಟ್ಟದಲ್ಲಿ ನವರಂಗ, ಮುಖಮಂಟಪದಿಂದ ಕೂಡಿದ ಬಿಳಿಗಿರಿರಂಗನ ಪುರಾತನ ದ್ರಾವಿಡಶೈಲಿಯ ದೇವಾಲಯವಿದೆ.

