ಕೊಡಗಿನ ಪ್ರವಾಹ ಪರಿಸ್ಥಿತಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿ : ಜಿ. ಪಂ. ಸದಸ್ಯ ಬಿ.ಎನ್. ಪ್ರತ್ಯು ಒತ್ತಾಯ

ಮಡಿಕೇರಿ ಆ. 13 : ಪ್ರತಿ ವರ್ಷದ ಮಳೆಗಾಲದಲ್ಲಿ ಕೊಡಗಿನಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರವಾಹದಿಂದಾಗಿ ಬೆಳೆ ಕಳೆದುಕೊಳ್ಳುವ ರೈತರಿಗೆ ಸರಕಾರದಿಂದ ನೀಡಲಾಗುವ ಪರಿಹಾರ ಧನದ ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪ್ರತ್ಯು ಸರಕಾರವನ್ನು ಒತ್ತಾಯಿಸಿದ್ದಾರೆ
ಈ ಬಾರಿ ಉಂಟಾದ ಪ್ರವಾಹದಿಂದ ತತ್ತರಿಸಿದ ಲಕ್ಷ್ಮಣತೀರ್ಥ ನದಿ ದಂಡೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎದುರಾದ ಪ್ರವಾಹದಿಂದ ಈ ಭಾಗದ ಜನತೆ ಮತ್ತು ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಇವರಿಗೆ ಸರಕಾರದ ಸೂಕ್ತ ಪರಿಹಾರದ ನೆರವಲ್ಲದೆ ಬೇರೆ ಮಾರ್ಗಗಳೇ ಇಲ್ಲ. ಆದ್ದರಿಂದ ಸರಕಾರ ಈ ಬಗ್ಗೆ ಎಚ್ಚೆತ್ತು ಕೊಡಗಿನ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ಪ್ರತಿವರ್ಷ ಅತಿವೃಷ್ಟಿ ಉಂಟಾಗುತ್ತಿರುವುದರಿಂದ ಜನತೆ ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಲಕ್ಷ್ಮಣತೀರ್ಥ ನದಿ ಮಾರ್ಗದಲ್ಲಿ ಹೊಳೆತ್ತಬೇಕೆಂಬ ಬಹುಕಾಲದ ಬೇಡಿಕೆ ಇನ್ನೂ ಈಡೇರಲಿಲ್ಲ. ಇದರಿಂದ ಪ್ರವಾಹ ಸಂದರ್ಭದಲ್ಲಿ ರೈತರ ಬೆಳೆಗಳು ಪ್ರತಿವರ್ಷ ನೀರು ಪಾಲಾಗುತ್ತಿದೆ. ಈ ಕಾರಣಕ್ಕಾಗಿಯೇ ದಕ್ಷಿಣ ಕೊಡಗಿನಲ್ಲಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಯನ್ನೇ ಜೀವಾಳವಾಗಿಸಿಕೊಂಡಿರುವ ರೈತರು ಅತಿವೃಷ್ಟಿಯಿಂದ ತತ್ತರಿಸಿಹೋಗಿದ್ದಾರೆ ಎಂದು ಪ್ರತ್ಯು ಅವರು ಹೇಳಿದ್ದಾರೆ.
ಪ್ರತಿವರ್ಷ ಬೆಳೆ ನಷ್ಟದಿಂದ ಹೆಚ್ಚುವರಿ ಸಾಲ ರೈತರ ಮೇಲೆ ಬೀಳುತ್ತಿರುವುದರಿಂದ ಅವರು ಸಾಲಗಾರರಾಗಿ ಕೊರಗುವಂತಾಗಿದೆ. ಜೊತೆಗೆ ನಿರಂತರವಾಗಿ ಕಾಡುತ್ತಿರುವ ವನ್ಯಜೀವಿಗಳ ಹಾವಳಿಯಿಂದ ಬೆಳೆಗಾರರು ರೋಸಿ ಹೋಗಿದ್ದಾರೆ ಎಂದು ರೈತರ ಸಂಕಷ್ಟವನ್ನು ವಿವರಿಸಿರುವ ಬಿ.ಎನ್.ಪ್ರತ್ಯು ಅವರು, ಇನ್ನಾದರೂ ರೈತರ ತಾಳ್ಮೆಯನ್ನು ಪರೀಕ್ಷಿಸಲು ಮುಂದಾಗಬಾರದು. ಬದಲಿಗೆ ಅದಕ್ಕಿರುವ ಶಾಶ್ವತ ಪರಿಹಾರದ ಮಾರ್ಗೋಪಾಯಗಳನ್ನು ಸರಕಾರ ಮತ್ತು ಜಿಲ್ಲಾಡಳಿತ ಕೂಡಲೇ ಕಂಡುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿಗೆ ದಕ್ಷಿಣ ಕೊಡಗಿನಲ್ಲಿ ಬಿದ್ದ ಬಾರಿ ಮಳೆಯಿಂದಾಗಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಬಹಳಷ್ಟು ಪ್ರದೇಶಗಳಲ್ಲಿ ತೀವ್ರ ಪ್ರಮಾಣದ ಹಾನಿಯಾಗಿದೆ. ನಾಟಿ ಮಾಡಿದ ಭತ್ತದ ಪೈರು ಸಂಪೂರ್ಣವಾಗಿ ಪ್ರವಾಹದ ನೀರಿನಲ್ಲಿ ಮುಳುಗಿ ಕೊಳೆತು ಹೋಗಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದು ಇಂದಿಗೂ ದಕ್ಷಿಣ ಕೊಡಗಿನ ಹಲವು ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ಈ ಎಲ್ಲಾ ಕಾರಣದಿಂದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರ ಕಣ್ಣೀರೊರೆಸುವ ಕೆಲಸವಾಗಬೇಕು ಎಂದು ಹೇಳಿರುವ ಬಿ.ಎನ್. ಪ್ರತ್ಯು, ಈಗಾಗಲೇ ತಮ್ಮ ಬೆಳೆ ಹಾನಿಯಾಗಿರುವ ರೈತರು ಸಂಬಂಧಿತ ಆರ್.ಟಿ.ಸಿ., ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಹಾನಿಯಾದ ಬೆಳೆಯ ಚಿತ್ರಗಳ ಸಹಿತ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕೋರಿದರು.
ಅತಿವೃಷ್ಟಿಯಿಂದಾಗಿ ತೊಂದರೆ ಅನುಭವಿಸುವ ಸಂತ್ರಸ್ತ ಬೆಳಗಾರರಿಗೆ ನೀಡಲಾಗುವ ಪರಿಹಾರ ಧನ ಇಂದಿನ ಆರ್ಥಿಕ ಕಾಲಘಟ್ಟದಲ್ಲಿ ತುಂಬಾ ಕಡಿಮೆ ಮೊತ್ತವಾಗಿದೆ. ಹಲವು ವರ್ಷಗಳ ಹಿಂದೆ ಅಂದಿನ ಸರಕಾರ ಜಾರಿಗೆ ತಂದಿರುವ ಪರಿಹಾರ ಮಾರ್ಗಸೂಚಿಯನ್ನೇ ಇಂದಿಗೂ ಮುಂದುವರಿಸಲಾಗುತ್ತಿದೆ. ಅದ್ದರಿಂದ ಪ್ರಕೃತಿ ವಿಕೋಪ ಸಂಬಂಧಿತ ಪರಿಹಾರ ಧನದ ಮಾರ್ಗಸೂಚಿಯನ್ನು ಸರಕಾರ ಕೂಡಲೇ ಪರಿಷ್ಕರಿಸಿ ಎಲ್ಲಾ ವಿಧದ ಪರಿಹಾರ ಧನದ ಮೊತ್ತವನ್ನು ಹೆಚ್ಚು ಮಾಡಿ ಸಂತ್ರಸ್ತ ರೈತರ ಬದುಕಿಗೆ ಚೈತನ್ಯ ತುಂಬಲು ಮುಂದಾಗಬೇಕು. ಜೊತೆಗೆ ಲಕ್ಷ್ಮಣ ತೀರ್ಥ ನದಿ ಮಾರ್ಗದಲ್ಲಿ ಹೂಳೆತ್ತುವ ಕೆಲಸವಾಗಬೇಕು ಎಂದು ಆಗ್ರಹಿಸಿರುವ ಬಿ.ಎನ್. ಪ್ರತ್ಯು, ಕೊಡಗಿನಲ್ಲಿ ತೊಂದರೆ ಅನುಭವಿಸುತ್ತಿರುವ ಜನತೆಗಾಗಿ ಸರಕಾರ ಕನಿಷ್ಠ ಇಷ್ಟಾದರೂ ಮಾಡದಿದ್ದರೆ, ಜನ ಚಳುವಳಿಯ ಮೂಲಕ ಸರಕಾರದ ಕಣ್ಣು ತೆರೆಸುವುದು ಅನಿವಾರ್ಯವಾದಿತು ಎಂದು ಅವರು ಎಚ್ಚರಿಸಿದ್ದಾರೆ.
ಇದಕ್ಕೂ ಮೊದಲು ಲಕ್ಷ್ಮಣತೀರ್ಥ ನದಿದಂಡೆ ಪ್ರದೇಶಗಳಾದ ಕಾನೂರು, ನಿಟ್ಟೂರು, ಬಾಳೆಲೆ ಮೊದಲಾದ ಗದ್ದೆ ಪ್ರದೇಶಗಳಿಗೆ ಇವರು ಭೇಟಿ ನೀಡಿ ಪರಿಶೀಲಿಸಿದರು.
ಪರಿಶೀಲನೆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಯ ಗೋಣಿಕೊಪ್ಪಲು ಕ್ಷೇತ್ರದ ಸದಸ್ಯರಾದ ಸಿ.ಕೆ. ಬೋಪಣ್ಣ, ಬಾಳೆಲೆ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ಸುನಿತಾ, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪೋರಂಗಡ ಪವನ್, ಬಾಳೆಲೆ ಹೋಬಳಿಯ ಉಪ ತಹಶೀಲ್ದಾರ್ ಮಂಜುನಾಥ್, ಗ್ರಾಮಲೆಕ್ಕಿಗರಾದ ಉಮೇಶ್ ಉಪಸ್ಥಿತರಿದ್ದರು.
