ಪಿಯು ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಶಿಕ್ಷಣ : ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಹಾಲಿಂಗಯ್ಯ ಮಾಹಿತಿ

ಮಡಿಕೇರಿ ಆ.13 : ಪದವಿ ಪೂರ್ವ ಶಿಕಣ ಇಲಾಖೆ ದ್ವಿತೀಯ ಪಿಯು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ಆನ್‍ಲೈನ್ ಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸಿ.ಎಂ.ಮಹಾಲಿಂಗಯ್ಯ ಅವರು ತಿಳಿಸಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಠಿಯಿಂದ ಶಾಲಾ ಕಾಲೇಜುಗಳನ್ನು ಆಗಸ್ಟ್, 31 ರವರೆಗೆ ತೆರೆಯದಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಓದಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಸಾಕಷ್ಟು ನೆರವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಯುಟ್ಯೂಬ್ ಮೂಲಕ ಪಠ್ಯ ವಿಷಯವನ್ನು ಪ್ರತಿ ದಿನ ಆಯಾಯ ಜಿಲ್ಲೆಯ ಪದವಿ ಪೂರ್ವ ಇಲಾಖಾ ಉಪ ನಿರ್ದೇಶಕರಿಗೆ ಕಳುಹಿಸಲಾಗುತ್ತದೆ. ಬಳಿಕ ಉಪ ನಿರ್ದೇಶಕರು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಪಠ್ಯ ವಿಷಯವನ್ನು ಕಳುಹಿಸುತ್ತಾರೆ. ನಂತರ ಕಾಲೇಜಿನ ಪ್ರಾಂಶುಪಾಲರು ವಿಷಯವಾರು ಉಪನ್ಯಾಸಕರಿಗೆ ಪಠ್ಯ ವಿಷಯವನ್ನು ಕಳುಹಿಸುತ್ತಾರೆ ಎಂದು ಅವರು ವಿವರಿಸಿದರು.
ಉಪನ್ಯಾಸಕರು ವಿದ್ಯಾರ್ಥಿಗಳ ವ್ಯಾಟ್ಸಪ್ ಗ್ರೂಪಿಗೆ ವಿಷಯವಾರು ಪಠ್ಯವನ್ನು ಕಳುಹಿಸಿ ಆ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗುವಂತೆ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ವಿದ್ಯಾರ್ಥಿಗಳು ಇಲಾಖೆ ವತಿಯಿಂದ ಕಳುಹಿಸಲಾದ ಪಠ್ಯ ವಿಷಯಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆಯೇ ಎಂಬ ಬಗ್ಗೆ ಖುದ್ದು ಉಪನ್ಯಾಸಕರೇ ಗಮನಹರಿಸಲಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯಗಳ ಬಗೆಗಿನ ಗೊಂದಲಗಳನ್ನೂ ಸಹ ಪರಿಹರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು.
ಜಿಲ್ಲೆಯಲ್ಲಿ ಆನ್‍ಲೈನ್ ತರಗತಿಯು ಉತ್ತಮವಾಗಿ ನಡೆಯುತ್ತಿದ್ದು, ಆನ್‍ಲೈನ್ ಮೂಲಕ ಪಠ್ಯ ವಿಷಯವನ್ನು ತಲುಪಿಸಲಾಗುತ್ತಿದೆ. ನೆಟ್‍ವರ್ಕ್ ಸೇರಿದಂತೆ ಇನ್ನಿತರ ಸಮಸ್ಯೆಗಳಿರುವ ವಿದ್ಯಾರ್ಥಿಗಳಿಗೂ ಸಹ ಆನ್‍ಲೈನ್ ತರಗತಿ ತಲುಪಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಥಮ ಪಿಯುಸಿ ಪ್ರವೇಶಕ್ಕೆ ಆಗಸ್ಟ್ 13 ರಿಂದ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ. ವಿದ್ಯಾರ್ಥಿಗಳು ಸಂಬಂಧಪಟ್ಟ ಕಾಲೇಜಿನಿಂದ ಅರ್ಜಿಗಳನ್ನು ಪಡೆದು ದಾಖಲಾತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಆನ್‍ಲೈನ್ ಸೌಲಭ್ಯ ಹೊಂದಿರುವ ಕಾಲೇಜುಗಳು ಆನ್‍ಲೈನ್ ಮುಖಾಂತರವಾಗಿ ಅರ್ಜಿ ನೀಡಬಹುದಾಗಿದ್ದು, ಆನ್‍ಲೈನ್ ಮುಖಾಂತರವೇ ದಾಖಲಾತಿ ಪ್ರಕ್ರಿಯೆಯನ್ನು ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಅಲ್ಲದೇ ಇಲಾಖೆಯ ಮಾರ್ಗಸೂಚಿಯಂತೆ ಯಾವುದೇ ಕಾಲೇಜು ಸಹ ಕಳೆದ ವರ್ಷಕ್ಕಿಂತ ಹೆಚ್ಚು ಶುಲ್ಕವನ್ನು ಪಡೆಯುವಂತಿಲ್ಲ. ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯ ಮಾರ್ಗಸೂಚಿಯಂತೆ ದಾಖಲಾತಿ ಪ್ರಕ್ರಿಯೆ ಕೈಗೊಳ್ಳಬೇಕು. ಈ ಪ್ರಕ್ರಿಯೆ ಮುಗಿದ ನಂತರ ಕಾಲೇಜು ಆರಂಭದ ಬಗ್ಗೆ ಇಲಾಖೆ ವತಿಯಿಂದ ತಿಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ದ್ವಿತೀಯ ಪಿಯು ಪ್ರವೇಶಾತಿ ಸಂಬಂಧವೂ ಸಹ ಇಲಾಖಾ ಮಾರ್ಗಸೂಚಿಯಂತೆ ಪ್ರಾಂಶುಪಾಲರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಎಂ.ಮಹಾಲಿಂಗಯ್ಯ ಅವರು ತಿಳಿಸಿದ್ದಾರೆ.
