ಪಾವಿತ್ರ್ಯತೆಗೆ ದಕ್ಕೆ ತಂದಿರುವುದೇ ಬೆಟ್ಟ ಕುಸಿಯಲು ಕಾರಣ : ರಕ್ಷಣಾ ವೇದಿಕೆ ಅಭಿಪ್ರಾಯ

13/08/2020

ಮಡಿಕೇರಿ ಆ.13 : ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅವೈಜ್ಞಾನಿಕ ಹಾಗೂ ಅಧಾರ್ಮಿಕವಾದ ಕೆಲಸ ಕಾರ್ಯಗಳು, ಆಡಳಿತದಲ್ಲಿನ ಅವ್ಯವಸ್ಥೆ, ಪೂಜಾ ಕಾರ್ಯಗಳಲ್ಲಿನ ಅಶ್ರದ್ಧೆ ಗಜಗಿರಿ ಬೆಟ್ಟ ಕುಸಿಯಲು ಕಾರಣ ಎಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಅಭಿಪ್ರಾಯಪಟ್ಟಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಉಳ್ಳಿಯಡ ಎಂ.ಪೂವಯ್ಯ ಅವರು, ಭಾಗಮಂಡಲ -ತಲಕಾವೇರಿ ಕ್ಷೇತ್ರಗಳು ಪರಮ ಪವಿತ್ರವಾದ ತೀರ್ಥ ಕ್ಷೇತ್ರಗಳಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವೇದಿಕೆ ಹಾಗೂ ಭಕ್ತಾಧಿಗಳ ವಿರೋಧದ ನಡುವೆಯೂ ಇದನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳು ನಡೆದಿವೆ ಎಂದು ದೂರಿದರು.
ತಲಕಾವೇರಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅತಿಯಾದ ಕಾಂಕ್ರಿಟೀಕರಣ ಮಾಡಲಾಗಿದೆ. ಅಲ್ಲಿನ ತೀರ್ಥಕೊಳ ಹಾಗೂ ಸ್ನಾನಕೊಳಗಳ ಕಾಂಕ್ರಿಟೀಕರಣಕ್ಕೆ ವೇದಿಕೆ ಹಾಗೂ ಕೊಡಗಿನ ಭಕ್ತಾದಿಗಳು ತೀವ್ರ ವಿರೋಧ ವ್ಯಕ್ತಪಡಿಸುವುದರೊಂದಿಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ ನ್ಯಾಯಾಲಯದ ಹಾದಿ ತಪ್ಪಿಸಿ ಅಲ್ಲಿ ಕಾಂಕ್ರಿಟೀಕರಣ ಮಾಡಲಾಗಿದ್ದು, ಇದರಿಂದ ಈ ಎರಡೂ ಕೊಳಗಳಲ್ಲಿ ಮಳೆಗಾಲದಲ್ಲಿ ಉಕ್ಕುತ್ತಿದ್ದ ಜಲ ಇತ್ತೀಚಿನ ವರ್ಷಗಳಲ್ಲಿ ಮಾಯವಾಗಿ ಇತರೆಡೆಗಳಲ್ಲಿ ಉಕ್ಕುವಂತಾಯಿತು. ಇದರಿಂದ ಗಜಗಿರಿ ಬೆಟ್ಟದ ಮಣ್ಣು ಸಡಿಲಗೊಂಡು ಅನಾಹುತಕ್ಕೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.
ತಲಕಾವೇರಿ ಕ್ಷೇತ್ರದಲ್ಲಿ ತೀರ್ಥ ಕುಂಡಿಕೆಗೆ ಇರುವಷ್ಟೇ ಪಾವಿತ್ರ್ಯ ಬ್ರಹ್ಮಗಿರಿ ಬೆಟ್ಟಕ್ಕೂ ಇದೆ. ಈ ಬೆಟ್ಟಕ್ಕೆ ಮುಕ್ತ ಪ್ರವೇಶ ನಿಷಿದ್ಧವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಬೆಟ್ಟ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಈ ಬೆಟ್ಟದ ಮೇಲೆ ವರ್ಷವಿಡೀ ಲಕ್ಷಾಂvತರ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗುವುದರ ಜೊತೆಗೆ ಅಲ್ಲಿನ ಪವಿತ್ರವಾದ ಮೃತ್ತಿಕೆ ಹಾಗೂ ಹುಲ್ಲನ್ನು ಒಯ್ಯುತ್ತಾರೆ. ಇದರಿಂದ ಬೆಟ್ಟದ ಮೇಲೆ ನೀರು ನಿಂತು ಮಣ್ಣು ಸಡಿಲಗೊಳ್ಳುವಂತಾಗಿದೆ. ಇದರೊಂದಿಗೆ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಅರಣ್ಯ ಇಲಾಖೆ ಕೂಡಾ ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ತೋಡುವುದರ ಮೂಲಕ ಮತ್ತಷ್ಟು ನೀರು ಇಂಗುವಂತೆ ಮಾಡಿದ್ದು, ಇದರಿಂದಾಗಿ ಬ್ರಹ್ಮಗಿರಿ ಮತ್ತು ಅದಕ್ಕೆ ಪೂರಕ ಶಕ್ತಿಗಳಾಗಿ ನಿಂತಿರುವ ಇತರ ಬೆಟ್ಟಗಳಲ್ಲಿ ಜಲ ಒಸರುವ ಮೂಲಕ ಬೆಟ್ಟಗಳು ಕುಸಿಯುವಂತಾಗಿದೆ ಎಂದು ಅವರು ಹೇಳಿದರು.
::: ಕಂದಾಯ ಸಿಬ್ಬಂದಿ ಕಾರಣ :::
ತಲಕಾವೇರಿ ಕ್ಷೇತ್ರದ ಕೆಲವೇ ಮೀಟರ್‍ಗಳ ಅಂತರದಲ್ಲಿರುವ ಕೋಳಿಕಾಡು ಎಂಬಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬರು ಅಕ್ರಮವಾಗಿ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ನೂರಾರು ಮರಗಳನ್ನು ಕಡಿದು, ಅಲ್ಲಿನ ಜಾಗವನ್ನು ಸಮತಟ್ಟು ಮಾಡಿ ಅಲ್ಲಿ ಮನೆ, ಕೆರೆ ಸೇರಿದಂತೆ ಹಲವು ನಿರ್ಮಾಣ ಕಾರ್ಯಗಳನ್ನು ಮಾಡಿದ್ದು, ಇದರಿಂದಾಗಿ ಗಜಗಿರಿ ಬೆಟ್ಟದ ತಳ ಭಾಗ ಶಕ್ತಿಕಳೆದುಕೊಳ್ಳುವಂತಾಗಿದೆ. ಈ ಕಾಮಗಾರಿ ಕೂಡಾ ಬೆಟ್ಟ ಕುಸಿಯಲು ಕಾರಣವಾಗಿದೆ ಎಂದು ಪೂವಯ್ಯ ತಿಳಿಸಿದರು.
ತಲಕಾವೇರಿ ಕ್ಷೇತ್ರದಲ್ಲಿ ಯಾವುದೇ ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಬಾರದೆಂದು ವೇದಿಕೆ ಹಲವಾರು ಬಾರಿ ಆಕ್ಷೇಪಗಳನ್ನು ಸಲ್ಲಿಸುತ್ತಲೇ ಬಂದಿದೆ. ಒಂದು ವೇಳೆ ಇದಕ್ಕೆ ಅವಕಾಶ ನೀಡಿದರೂ ಅಲ್ಲಿನ ಪೂರ್ವ ಪರಂಪರೆಯನುಸಾರ ಸಂಜೆ 6 ಗಂಟೆಯ ಬಳಿಕ ಕ್ಷೇತ್ರದಲ್ಲಿ ಯಾರೂ ತಂಗುವಂತಿಲ್ಲ. ಆದರೆ, ಇಂತಹ ಧಾರ್ಮಿಕ ನಂಬುಗೆಗಳನ್ನು ಇಲ್ಲಿ ಕಡೆಗಣಿಸಲಾಗಿದೆ. ಮತ್ತೊಂದೆಡೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು ಪೂಜೆಯನ್ನು ಕೇವಲ ವೃತ್ತಿ ಮತ್ತು ಉದ್ಯೋಗವನ್ನಾಗಿ ಮಾತ್ರ ಪರಿಗಣಿಸಿದ್ದು, ಕ್ಷೇತ್ರದ ಪಾವಿತ್ರ್ಯತೆ ಮತ್ತು ಧಾರ್ಮಿಕ ಭಾವನೆಗಳನ್ನು ಉಳಿಸುವುದು ಅವಶ್ಯ ಎನ್ನುವ ಅಂಶವನ್ನು ಮರೆತಿದ್ದಾರೆ. ಅಷ್ಟಮಂಗಲ ಪ್ರಶ್ನೆಯಲ್ಲೂ ಇದು ಕಂಡು ಬಂದಿದೆ ಆದರೆ, ಈ ಸಂಬಂಧವಾಗಿ ಯಾವುದೇ ಪರಿಹಾರ ಕಾರ್ಯ ನಡೆಯದಿರುವುದು ಕೂಡ ದುರ್ಘಟನೆಗೆ ಕಾರಣವಾಗಿರಬಹುದೆಂದು ಅವರು ಹೇಳಿದರು.
ನ್ಯಾಯಾಲಯದ ಆದೇಶಗಳನ್ನೂ ಧಿಕ್ಕರಿಸಿ ಅಭಿವೃದ್ಧಿ ಕಾಮಗಾರಿ ನಡೆಸುವ ಮೂಲಕ ತಲಕಾವೇರಿಯ ಮೂಲ ಸ್ವರೂಪಕ್ಕೆ ಧಕ್ಕೆ ಉಂಟು ಮಾಡಲಾಗಿದೆ. ಸ್ಥಳೀಯ ಭಕ್ತರ ಆಶಯಗಳಿಗೆ ವಿರುದ್ಧವಾಗಿ ಹತ್ತು ಹಲವು ಬಗೆಯ ಅಧಾರ್ಮಿಕ ಚಟುವಟಿಕೆಗಳು ನಡೆದಿರುವುದೇ ಪ್ರಸಕ್ತ ಪ್ರಾಕೃತಿಕ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
::: ಶುದ್ಧೀಕರಣವಾಗದೆ ಪೂಜೆ ಬೇಡ :::
ಕ್ಷೇತ್ರದ ಪ್ರಧಾನ ಅರ್ಚಕ ಕುಟುಂಬದ ಸಾವಿನ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಪೂಜಾ ಕಾರ್ಯಗಳು ಸ್ಥಗಿತಗೊಂಡಿದೆ. ಪ್ರಸ್ತುತ ಸಾವಿನ ಹಿನ್ನೆಲೆಯ ಸೂತಕದ ನಿವಾರಣೆಗೆ ಅಗತ್ಯ ಶುದ್ಧೀಕರಣ ಕಾರ್ಯಗಳು, ಧಾರ್ಮಿಕ ಆಚರಣೆಗಳ ಬಳಿಕ ತಂತ್ರಿಗಳು ಮತ್ತು ಧಾರ್ಮಿಕ ತಜ್ಞರ ಸಲಹೆ ಸೂಚನೆಗಳನ್ನು ಪಡೆದು ಕ್ಷೇತ್ರದಲ್ಲಿ ಧಾರ್ಮಿಕ ಪುನರುಜ್ಜೀವನಕ್ಕೆ ಸಮರ್ಥ ಕ್ರಿಯಾ ಯೋಜನೆ ರೂಪಿಸಬೇಕೆಂದು ವೇದಿಕೆಯ ಮುಖಂಡ ಮಣವಟ್ಟೀರ ದೊರೆ ಸೋಮಣ್ಣ ಮನವಿ ಮಾಡಿದರು.
ವೇದಿಕೆಯ ಪ್ರಮುಖರಾದ ಕೊಕ್ಕಲೆರ ಎ. ಕಾರ್ಯಪ್ಪ ಮಾತನಾಡಿ, ತಲಕಾವೇರಿ ತೀರ್ಥ ಕುಂಡಿಕೆಯ ಕೆಲವೇ ಮೀಟರ್‍ಗಳ ದೂರದ ಚೇರಂಗಾಲ ಗ್ರಾಮದ ಕೋಳಿಕಾಡು ಗ್ರಾಮದಲ್ಲಿ ಕಂದಾಯ ಇಲಾಖೆ ಉದ್ಯೋಗಿಯೊಬ್ಬರು ಸರ್ಕಾರಿ ಜಾಗವನ್ನು ಕಬಳಿಸಿ ಅಕ್ರಮವಾಗಿ ಮರಗಳನ್ನು ಕಡಿದು ರೆಸಾರ್ಟ್ ನಿರ್ಮಾಣಕ್ಕೆ ಬೆಟ್ಟ ಪ್ರದೇಶವನ್ನು ಸಮತಟ್ಟು ಮಾಡಿದ್ದಾರೆ. ಆದರೆ, ಅವರ ವಿರುದ್ಧ ಅರಣ್ಯ ಇಲಾಖೆಯಾಗಲಿ, ಕಂದಾಯ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಟಾಚಾರಕ್ಕೆಂಬಂತೆ ಅವರನ್ನು ಅಮಾನತುಗೊಳಿಸಲಾಗಿದ್ದರೂ, ಕಾನೂನಿನಡಿ ಅವರು ಅದರಿಂದ ಪಾರಾಗುವಂತೆ ನೋಡಿಕೊಳ್ಳಲಾಗಿದೆ. ಈ ಪ್ರಕರಣದ ಹಿಂದೆ ಪ್ರಭಾವಿಗಳ ಹಸ್ತಕ್ಷೇಪವಿರುವ ಬಗ್ಗೆ ಶಂಕೆ ಇದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಕಾನೂನು ಸಲಹೆಗಾರ ಕಿರಿಯಮಾಡ ರತನ್ ತಮ್ಮಯ್ಯ ಹಾಗೂ ಸದಸ್ಯ ಮಣವಟ್ಟಿರ ಪಾಪು ಚಂಗಪ್ಪ ಉಪಸ್ಥಿತರಿದ್ದರು.