ಮೂವರ ಪತ್ತೆಗಾಗಿ ತಲಕಾವೇರಿಯಲ್ಲಿ ಮುಂದುವರಿದ ಕಾರ್ಯಾಚರಣೆ

13/08/2020

ಮಡಿಕೇರಿ ಆ.13 : ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಸಾಲಿನ ಗಜಗಿರಿ ಬೆಟ್ಟ ಕುಸಿದು ನಾಪತ್ತೆಯಾದ ಇತರ 3 ಮಂದಿಗಾಗಿ ಗುರುವಾರವೂ ನಿರಂತರವಾಗಿ ಶೋಧ ಕಾರ್ಯ ಮುಂದುವರಿಯಿತು. ಗುರುವಾರದಿಂದ ಮುಂದಿನ ದಿನಗಳವರೆಗೆ ನಡೆಯುವ ಕಾರ್ಯಾಚರಣೆಗೆ “ಆಪರೇಷನ್ ಬ್ರಹ್ಮಗಿರಿ ಬಿ” ಎಂದು ಹೆಸರಿಡಲಾಗಿದೆ.
“ಬಿ” ಫ್ಲಾನ್ ಪ್ರಕಾರ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಭಾಗಮಂಡಲ ಪೊಲೀಸರು, ಅರಣ್ಯ ಇಲಾಖೆ, ಅಗ್ನಿ ಶಾಮಕ ದಳದ 150ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿಗಳು 2 ತಂಡಗಳಾಗಿ ಮತ್ತು ತಲಾ 18 ಮಂದಿ ಸಿಬ್ಬಂದಿಗಳು 4 ಪ್ರತ್ಯೇಕ ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಭೂ ಕುಸಿತವಾದ ಪ್ರದೇಶವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೂಕ್ಷ್ಮವಾಗಿ ಅರಿತಿರುವ ಹಿನೆÀ್ನಲೆಯಲ್ಲಿ ಅವರ ಮಾರ್ಗಸೂಚಿಯಂತೆ ನಾರಾಯಣಾಚಾರ್ ಅವರ ಮೃತದೇಹ ಪತ್ತೆಯಾದ ನಾಗತೀರ್ಥ ಸ್ಥಳದಿಂದ ಕೆಳಗಿನ 3 ಕಿ.ಮೀ ಉದ್ದಕ್ಕೂ ಶೋಧ ನಡೆಸಲಾಯಿತು. ಮಳೆ, ದಟ್ಟ ಮಂಜಿನ ವಾತಾವರಣದ ನಡುವೆ ಕೆಸರು ರಾಶಿಯಲ್ಲಿ ಜಾರುತ್ತಾ ಬೀಳುತ್ತಾ ಸವಾಲಿನ ಹರಸಾಹಸದ ಶೋಧ ಕಾರ್ಯಕೈಗೊಂಡಿದ್ದರು. ಮರದ ದಿಮ್ಮಿಗಳು, ಕಲ್ಲು ಬಂಡೆಗಳು ಅಡ್ಡಿಯಾದರೂ ಸಂಜೆಯ ವರೆಗೆ ಕಾರ್ಯಾಚರಣೆ ನಡೆಯಿತು.