ಪ್ರಸಕ್ತ ಸಾಲಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ

ಮಡಿಕೇರಿ ಆ.14 : ಪ್ರಸ್ತಕ ಸಾಲಿನ ಬೆಳೆ ಸಮೀಕ್ಷೆಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿ ಪಡಿಸಿರುವ ನೂತನ “ರೈತ ಬೆಳೆ ಸಮೀಕ್ಷೆ ಆಪ್–2020-21” ಮೂಲಕ ಸ್ವಯಂ ರೈತರೇ ತಾವು ಬೆಳೆದಿರುವ ಬೆಳೆಯನ್ನು ನಮೂದಿಸಲು ಆಗಸ್ಟ್ 24 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೆಳೆ ಸಮೀಕ್ಷೆಯ ಯೋಜನೆಯನ್ವಯ ಜಿಲ್ಲೆಯ ರೈತರು ತಮ್ಮ ಜಮೀನಿನ ಸರ್ವೆ ನಂ, ಹಿಸ್ಸಾ ನಂಬರ್‍ವಾರು ತಾವು ಬೆಳೆದ ಕೃಷಿ ಬೆಳೆ, ಬಹುವಾರ್ಷಿಕ ತೋಟಗಾರಿಕೆ, ಅರಣ್ಯ ಇತರೆ ಬೆಳೆಗಳನ್ನು ಪ್ಲೇಸ್ಟೋರ್ ಲಭ್ಯವಿರುವ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಂಡು ಸ್ವತಃ ತಾವೇ ಬೆಳೆ ಸಮೀಕ್ಷೆ ಮಾಡುವುದರ ಮೂಲಕ ನೊಂದಣಿ ಮಾಡಬಹುದಾಗಿದೆ ಎಂದು ತಿಳಿಸಿದರು.
ಬೆಳೆ ಸಮೀಕ್ಷೆ ದತ್ತಾಂಶವವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಸಂದರ್ಭದಲ್ಲಿ, ಎನ್‍ಡಿಆರ್‍ಎಫ್/ ಎಸ್‍ಡಿಆರ್‍ಎಫ್‍ಯಡಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ, ಬೆಳೆ ವಿಮಾ ಯೋಜನೆಯಡಿ ಸರ್ವೆ ನಂಬರ್‍ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಲು ಸರ್ವೆ ನಂಬರ್ ಆಯ್ಕೆ ಮಾಡಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆ ಅನುಷ್ಠಾನಕ್ಕಾಗಿ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಾತಿಗೆ ಬೆಳೆ ಸಮೀಕ್ಷೆ ಮಾಹಿತಿಯು ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಈ ಹಿಂದೆ ನಡೆಯುತ್ತಿದ್ದ ಸಮೀಕ್ಷೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿದ್ದ ಪರಿಣಾಮ ರೈತರು ಆಕ್ಷೇಪಣೆಗಳನ್ನು ವ್ಯಕ್ತ ಪಡಿಸುತ್ತಿದ್ದರು. ಆದರೆ ಈಗ ರೈತರೇ ಸ್ವತಃ ತಮ್ಮ ಜಮೀನಿನ ಸರ್ವೇ ನಂಬರ್, ಹಿಸ್ಸಾ ನಂಬರ್‍ವಾರು ಬೆಳೆ ಮಾಹಿತಿಯನ್ನು ಜಮೀನಿನಲ್ಲಿ ನಿಂತು ಆಪ್‍ಲೋಡ್ ಮಾಡುವುದರ ಮೂಲಕ ದಾಖಲಿಸಬಹುದಾಗಿದೆ. ಈ ಸಮೀಕ್ಷೆ ಕಾರ್ಯವನ್ನು ಆಗಸ್ಟ್ 24 ರೊಳಗಾಗಿ ಆಪ್‍ಲೋಡ್ ಮಾಡಲು ಕಾಲ ಮಿತಿ ನಿಗಧಿಪಡಿಸಲಾಗಿದೆ. ರೈತರು ನಿಗಧಿತ ಸಮಯದೊಳಗೆ ತಾವು ಬೆಳೆದ ಮಾಹಿತಿಯನ್ನು ಆಪ್ ಲೋಡ್ ಮಾಡದೇ ಇದ್ದ ಪಕ್ಷದಲ್ಲಿ ಆಗಸ್ಟ್ 24ರ ನಂತರ ಖಾಸಗಿ ನಿವಾಸಿಗಳ ಸಹಾಯದಿಂದ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಮಾಹಿತಿಯನ್ನು ದಾಖಲಿಸಬಹುದಾಗಿದೆ. ರೈತರು ಆಪ್ ನಲ್ಲಿ ದಾಖಲೆ ಮಾಡಿದ ಬೆಳೆ ಸಮೀಕ್ಷೆಯನ್ನು ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿ ಪ್ರಮಾಣೀಕರಿಸಲಿದ್ದಾರೆ ಎಂದರು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಭಾನ ಎಂ. ಷೇಕ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ತಹಶೀಲ್ದಾರರು ಇತರರು ಇದ್ದರು.
ಬೆಳೆ ಸಮೀಕ್ಷೆ ಬಗ್ಗೆ ಸಚಿವರಿಂದ ವಿಡಿಯೊ ಸಂವಾದ:- ಪ್ರಸ್ತಕ ಸಾಲಿನಲ್ಲಿ ಬೆಳೆ ಸಮೀಕ್ಷೆಯನ್ನು ಉತ್ಸವದ ರೂಪದಲ್ಲಿ ಕೈಗೊಳ್ಳಬೇಕು. ರೈತಪರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬೆಳೆ ಸಮೀಕ್ಷೆಯನ್ನು ಕೃಷಿ ಇಲಾಖೆಯ ಮೂಲಕ ದೇಶದಲ್ಲೇ ಪ್ರಥಮ ಬಾರಿಗೆ ರೈತರೇ ಸ್ವತಃ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು “ರೈತ ಬೆಳೆ ಸಮೀಕ್ಷೆ ಆಪ್ 2020-21” ಮೂಲಕ ನಮೂದಿಸಲು ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ರೈತರು ಮೊಬೈಲ್ ಆಪ್ ಬಳಸಿ, ಬೆಳೆ ಸಮೀಕ್ಷೆ ಕೈಗೊಂಡು ತಮ್ಮ ಬೆಳೆಗಳಿಗೆ ತಾವೇ ಧೃಡೀಕರಣ ನೀಡುವಂತಾಗಬೇಕು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಜಿಲ್ಲಾಧಿಕಾರಿ ಜತೆ ನಡೆದ ವಿಡಿಯೊ ಸಂವಾದದಲ್ಲಿ ತಿಳಿಸಿದ್ದಾರೆ.
ರೈತ ಬೆಳೆ ಸಮೀಕ್ಷೆ ಮೊಬೈಲ್ ಆಪ್:-ಗೂಗಲ್ ಪ್ಲೇಸ್ಟೋರ್ ನಲ್ಲಿ “Farmers Crop Survey App 2020-21” ನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಆರ್ಥಿಕ ವರ್ಷ ಹಾಗೂ ಋತುಮಾನ ದಾಖಲಿಸಬೇಕು. ರೈತರ ಹೆಸರು, ಮೊಬೈಲ್ ಸಂಖ್ಯೆ, ಒಟಿಪಿ(ಔಖಿP) ನಮೂದಿಸಿ ರೈತರು ತಮ್ಮ ವಿವರಗಳನ್ನು ನೊಂದಣಿ ಮಾಡಿಕೊಳ್ಳಬೇಕು. ಮೊಬೈಲ್ ಆಪ್‍ನಲ್ಲಿ ಮೊದಲು ಮಾಸ್ಟರ್ ವಿವರ ಪಹಣಿ ಮತ್ತು ಮಾಲೀಕರ ವಿವರ, ಪಾಲಿಗಾನ್ ಹಾಗೂ ಜಿ.ಐ.ಎಸ್ ಮ್ಯಾಪ್ ಡೌನ್‍ಲೋಡ್ ಮಾಡಿಕೊಳ್ಳುವುದು. ಬೆಳೆ ಸರ್ವೆ ಪ್ರಾರಂಭಿಸು ಕ್ಲಿಕ್ ಮಾಡುವುದು. ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ತಮ್ಮ ಜಮೀನಿನ ಸರ್ವೆ ನಂಬರ್‍ಗಳನ್ನು ಆಪ್‍ಗೆ ಸೇರಿಸಿಕೊಳ್ಳಬೇಕು. ಹಾಗೂ ಹಿಸ್ಸಾ ಇದ್ದರೆ ಆಯ್ಕೆ ಮಾಡಬೇಕು. ಮಾಲೀಕರ ಹೆಸರು ಆಯ್ಕೆ ಮಾಡಿ, ಕ್ಷೇತ್ರ ನಮೂದಿಸುವುದು. ಮಾಲೀಕರ ಪರವಾಗಿ ಇನ್ನೊಬ್ಬರ ಬೆಳೆ ದಾಖಲೆ ಮಾಡುತ್ತಿದ್ದರೆ ರೈತರ ಪರವಾಗಿ ಬೆಳೆ ಮಾಹಿತಿಯನ್ನು ದಾಖಲಿಸುತ್ತಿದ್ದೆನೆಂದು ಆಯ್ಕೆ ಮಾಡುವುದು. ರೈತರ ಪರವಾಗಿ ದಾಖಲಿಸುತ್ತಿದ್ದರೆ, ಸದರಿ ರೈತರ ಮೊಬೈಲ್ ನಂಬರ್ ದಾಖಲಿಸಿ ಮಾಹಿತಿಯನ್ನು ಡೌನ್‍ಲೋಡ್ ಮಾಡುವುದು. ಈ ರೈತರ ಹೊಲಕ್ಕೆ ಹೋಗಿ ಸರ್ವೆ ನಂಬರ್‍ಗಳಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ 2 ತೆಗೆದು ಪೋಟೋ ತೆಗೆದು, ಅಪ್ಲೋಡ್ ಮಾಡಿ ಮಾಹಿತಿ ನೀಡುವಂತಾಗಬೇಕು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
