ಕೊಡಗಿನಲ್ಲಿ ಕೋವಿಡ್ ಗೆ ಮತ್ತೊಂದು ಬಲಿ: ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ

14/08/2020

ಮಡಿಕೇರಿ ಆ.14 : ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನ ಹಿಂದೆಯೇ ಕೊಡಗು ಜಿಲ್ಲೆಯಲ್ಲಿ ಸೋಂಕಿನಿಂದ ಮತ್ತೊಂದು ಸಾವು ಸಂಭವಿಸಿದೆ.
ಮಡಿಕೇರಿಯ ಭಗವತಿ ನಗರದ ನಿವಾಸಿ 58 ವರ್ಷದ ಪುರುಷರೊಬ್ಬರು ಶುಕ್ರವಾರ ಸಾವಿಗೀಡಾಗಿದ್ದು, ಇದರೊಂದಿಗೆ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಮಡಿಕೇರಿ ಭಗವತಿ ನಗರದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಆರೋಗ್ಯ ಸಮಸ್ಯೆಗಳಿದ್ದ 58 ವರ್ಷದ ಪುರುಷರೊಬ್ಬರಲ್ಲಿ ಆ.9ರಂದು ಸ್ವಲ್ಪ ತಲೆನೋವು ಕಾಣಿಸಿಕೊಂಡಿದ್ದು, ಮರುದಿನ ಜ್ವರ ಬಂದಿತ್ತು. ಈ ಸಂಬಂಧ ಆ.11ರಂದು ಕೋವಿಡ್ ಪರೀಕ್ಷೆ ಮಾಡಿಸಿದ್ದು, ಬುಧವಾರ ಬಂದ ವರದಿಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಈ ಸಂಬಂಧ ತಕ್ಷಣ ಅಂಬ್ಯುಲೆನ್ಸ್ ಮೂಲಕ ಅವರನ್ನು ಕೋವಿಡ್ ಆಸ್ಪತ್ರೆಗೆ ಕರೆತರಲಾಯಿತು. ಬರುವಾಗಲೇ ಅವರಿಗೆ ಉಸಿರಾಟದ ತೊಂದರೆ ಇದ್ದ ಕಾರಣ ಅವರನ್ನು ನೇರವಾಗಿ ಐ.ಸಿ.ಯು ವಾರ್ಡ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯ ಸ್ತಂಭನದಿಂದ ಶುಕ್ರವಾರ 11.15 ಗಂಟೆಗೆ ಸಾವಿಗೀಡಾದರು.
ಮೃತ ದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.