ನಾರಾಯಣ ಆಚಾರ್ ತೇಜೋವಧೆ ಸರಿಯಲ್ಲ : ಮನುಮುತ್ತಪ್ಪ ಆಕ್ಷೇಪ

14/08/2020

ಮಡಿಕೇರಿ ಆ.14 : ತಲಕಾವೇರಿ ಕ್ಷೇತ್ರದಲ್ಲಿ ಕಳೆದ ಆರು ದಶಕಗಳಿಂದ ಪೂಜಾ ಕೈಂಕರ್ಯಗಳನ್ನು ನಿಷ್ಕಳಂಕವಾಗಿ ನಡೆಸುತ್ತಾ ಬಂದಿದ್ದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ತೇಜೋವಧೆ ಖಂಡನಾರ್ಹವೆಂದು ಬೇಸರ ವ್ಯಕ್ತಪಡಿಸಿರುವ ಶ್ರೀತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮನುಮುತ್ತಪ್ಪ ಅವರು, ಅಪಪ್ರಚಾರದ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಅಡಗಿವೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಳೆಗಾಳಿ, ಬಿಸಿಲನ್ನು ಲೆಕ್ಕಿಸದೆ ಕಾವೆÉೀರಿಯ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದ ನಾರಾಯಣ ಆಚಾರ್ ಅವರ ವಿರುದ್ಧ, ಅವರ ಮರಣಾ ನಂತರ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿರುವುದು ತಲಕಾವೇರಿಯ ಕ್ಷೇತ್ರಕ್ಕೆ ಶೋಭೆಯನ್ನು ತರುವುದಿಲ್ಲವೆಂದರು.
ಗುಡ್ಡ ಕುಸಿತದಿಂದ ನಾರಾಯಣ ಆಚಾರ್ ಕುಟುಂಬ ದುರ್ಮರಣಕ್ಕೀಡಾದ ಹಂತದಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರ ತೇಜೋವಧೆ ಮಾಡುವ ರೀತಿಯ ಹೇಳಿಕೆಗಳನ್ನು ನೀಡಿರುವುದನ್ನು ಖಂಡಿಸುವುದಾಗಿ ತಿಳಿಸಿದ ಮನುಮುತ್ತಪ್ಪ್ಪ ಅವರು ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಯಾವತ್ತಿಗೂ ಒಳ್ಳೆಯದಲ್ಲವೆಂದರು.
ನಾರಾಯಣ ಆಚಾರ್ ಅವರ ಅಗಲಿಕೆ ಕೊಡಗಿಗೆ ತುಂಬಲಾರದ ನಷ್ಟವಾಗಿದ್ದು, ದೇಶ ವಿದೇಶಗಳಲ್ಲಿ ನೆಲೆಸಿರುವ ಕಾವೇರಿ ಕ್ಷೇತ್ರದ ಭಕ್ತಾದಿಗಳಿಗೆ ದೊಡ್ಡ ಆಘಾತವನ್ನೇ ಉಂಟು ಮಾಡಿದೆ. ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಷ್ಟು ಅವಧಿಯಲ್ಲಿ ಅವರು ಮಹತ್ವದ ಕಾರ್ಯವನ್ನು ನಡೆಸಿಕೊಂಡು ಬಂದಿದ್ದರು. ಈ ರೀತಿಯ ಜವಬ್ದಾರಿಯನ್ನು ಮುಂದೆ ನಿಭಾಯಿಸಿಕೊಂಡು ಹೋಗುವವರು ಯಾರು ಎಂದು ದುಃಖ ವ್ಯಕ್ತಪಡಿಸಿದರು.
ಪೂಜಾ ಕೈಂಕರ್ಯಗಳನ್ನು ನಡೆಸುವ ಅರ್ಚಕ ಕಟುಂಬ ಏನನ್ನೂ ಸಂಪಾದಿಸಲೇಬಾರದೆ, ಹತ್ತು ಕೆ.ಜಿ. ಚಿನ್ನ ಹೊಂದಿದ್ದರು ಎನ್ನುವ ಆಧಾರ ರಹಿತ ಆರೋಪಗಳು ಸುಳಿದಾಡಿವೆ. ಇದಕ್ಕೆ ಸಂಬಂಧಪಟ್ಟ ಯಾವುದೇ ಕುರುಹುಗಳು ಇಲ್ಲಿಯವರೆಗೆ ದೊರಕಿಲ್ಲವೆಂದು ಮನುಮುತ್ತಪ್ಪ ಸ್ಪಷ್ಟಪಡಿಸಿದರು.
ಶತಮಾನಗಳ ಹಿಂದೆ, ರಾಜನ ಆಳ್ವಿಕೆಯ ಅವಧಿಯಿಂದಲೇ ನಾರಾಯಣ ಆಚಾರ್ ಕುಟುಂಬ ತಲಕಾವೇರಿ ಕ್ಷೇತ್ರದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಎಂತದ್ದೇ ಕಠಿಣ ಪರಿಸ್ಥಿತಿಗಳಲ್ಲಿ ಬೆಟ್ಟದ ತಪ್ಪಲಿನ ತಮ್ಮ ಮನೆಯಿಂದ ಕ್ಷೇತ್ರಕ್ಕೆ ಆಗಮಿಸಿ ನಿಷ್ಕಳಂಕವಾಗಿ ಕಾವೇರಿಯ ಸೇವೆಯನ್ನು ಮಾಡಿದ್ದಾರೆ. ಇವರಿಗೆ ಪೂರ್ವಿಕರಿಂದ ಬಂದ ಆಸ್ತಿ ಇತ್ತಾದರೂ ಎಂದಿಗೂ ವಿಲಾಸಿ ಜೀವನ, ಮೋಜು ಮಸ್ತಿಯಲ್ಲಿ ತೊಡಗಿರಲಿಲ್ಲವೆಂದು ಸಮರ್ಥಿಸಿಕೊಂಡರು.
ತಲಕಾವೇರಿ ಕ್ಷೇತ್ರದ ಬಗ್ಗೆ ಮತ್ತು ಅಲ್ಲಿ ಸೇವೆ ಸಲ್ಲಿಸಿದ ಅರ್ಚಕರ ಕುರಿತು ಜ್ಞಾನವಿಲ್ಲದ ಮಂದಿ ಹೇಳಿಕೆಗಳನ್ನು ನೀಡುವುದನ್ನು ಇನ್ನಾದರು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ತಲಕಾವೇರಿ, ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಪ್ರಥಮ ಅಧ್ಯಕ್ಷರಾಗಿ, ಭಾಗಮಂಡಲ ವಿಎಸ್‍ಎಸ್‍ಎನ್ ಅಧ್ಯಕ್ಷರಾಗಿ, ಏಲಕ್ಕಿ ಸಹಕಾರ ಸಂಘದ ಅಧ್ಯಕ್ಷರಾಗಿ, ಮಡಿಕೇರಿ ಜನತಾ ಬಜಾರ್ ನಿರ್ದೇಶಕರಾಗಿ, ಭಾಗಮಂಡಲ ಕಾವೇರಿ ಶಾಲೆಯ ನಿರ್ದೇಶಕರಾಗಿ, ಸಂಬಾರ ಮಂಡಳಿಯ ನಿರ್ದೇಶಕರಾಗಿ ಜನಪರವಾದ ಸೇವೆ ಸಲ್ಲಿಸುವ ಮೂಲಕ ಮೇರು ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು. ಅಲ್ಲದೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಮೂಲಕ ಮಡಿಕೆÉೀರಿ ತಾಲ್ಲೂಕು ಶ್ರೇಷ್ಠ ಸಹಕಾರಿ ಪ್ರಶಸ್ತಿಗೂ ಭಾಜರಾಗಿದ್ದರು ಎಂದು ಮನುಮುತ್ತಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾಗಮಂಡಲ ಗಿರಿಜನ ಸಹಕಾರ ಸಂಘದ ನಿರ್ದೇಶಕ ರಂಜಿತ್, ಭಾಗಮಂಡಲ ನಿವಾಸಿಗಳಾದ ಪದ್ಮಯ್ಯ, ಪಾಡಿಯಮ್ಮನ ಮನು ಮಹೇಶ್ ಹಾಗೂ ಜಿಜೆಪಿ ಪ್ರಮುಖ ಕಾಳನ ರವಿ ಉಪಸ್ಥಿತರಿದ್ದರು.