ಎರಡು ಸಾವಿರ ವೈದ್ಯರ ನೇಮಕ

15/08/2020

ಬೆಂಗಳೂರು ಆ.15 : ಇನ್ನೊಂದು ವಾರದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಕನಿಷ್ಠ ಎರಡು ಸಾವಿರ ವೈದ್ಯರು ಹೆಚ್ಚುವರಿಯಾಗಿ ಲಭ್ಯರಾಗಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಒಂದೆರಡು ದಿನಗಳಲ್ಲಿ ಸ್ನಾತಕ, ಸ್ನಾತಕೋತ್ತರ ವೈದ್ಯ ಪದವಿ ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಇಂಟರ್ನಿ ವಿದ್ಯಾರ್ಥಿಗಳು ಕೊರೋನಾ ಸೋಂಕಿತರ ಚಿಕಿತ್ಸೆ ನೀಡಲು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದಿದ್ದಾರೆ.
ಕೆಂಗೇರಿ ಸಮೀಪದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಯೋಗಾಲಯ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿ ಅವರು,ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತವು ಅಮೇರಿ ಕಾದಂತಹ ಮುಂದುವರಿದ ರಾಷ್ಟ್ರಗಳಿಗಿಂತ ಉತ್ತಮ ಸಾಧನೆ ಮಾಡಿದೆ.ಆ ದೇಶಗಳಿಗಿಂತ ಸೌಲಭ್ಯಗಳ ಕೊರತೆ ಇದ್ದರೂ ಮರಣ ಪ್ರಮಾಣ ನಮ್ಮಲ್ಲಿ ಕಡಿಮೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಇದಕ್ಕೆ ಕಾರಣ ಎಂದರು.
ವೈದ್ಯರುಗಳಿಂದ ಜನರು ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ.ಇದೊಂದು ಪವಿತ್ರ ಹೊಣೆಗಾರಿಕೆಯಿರುವ ವೃತ್ತಿಯಾಗಿದ್ದು, ಭವಿಷ್ಯದಲ್ಲಿ ಇದರ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ವೈದ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.