ಉಗ್ರರ ಅಡಗುತಾಣ ಪತ್ತೆ

15/08/2020

ಬಾರಾಮುಲ್ಲಾ ಆ.15 : ಉತ್ತರ ಕಾಶ್ಮೀರ ಜಿಲ್ಲೆಯಾದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಉಗ್ರರ ಅಡಗುತಾಣ ಪತ್ತೆ ಮಾಡಿ, ಸ್ಥಳದಿಂದ ಗ್ರೆನೇಡ್, ಪಿಸ್ತೂಲ್, ಸ್ಫೋಟಕ ವಸ್ತುಗಳು ಮತ್ತು ಪಾಕ್ ಕರೆನ್ಸಿ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.
ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಸೇನೆ ಆಗಸ್ಟ್ 11 ರಂದು ಬಾರಾಮುಲ್ಲಾದ ಟ್ರೆನೇರಿಯನ್ ಡೋಗಿ ಪಹಾಡ್‍ನಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ತೀವ್ರ ಶೋಧ ನಡೆಸಿದ ನಂತರ, ಸೇನೆ ಕೊನೆಗೆ ಗುರುವಾರ ಉಗ್ರರ ಅಡಗುತಾಣ ಪತ್ತೆಹಚ್ಚಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಭಾರೀ ಸಂಗ್ರಹವನ್ನು ವಶಪಡಿಸಿಕೊಂಡಿದೆ.ಮೂರು ಪಿಸ್ತೂಲ್‍ಗಳು ಮತ್ತು 73 ಸುತ್ತುಗಳ ಜೀವಂತ ಮದ್ದುಗುಂಡುಗಳು, ಎರಡು ಸ್ಫೋಟಕ ವಸ್ತುಗಳು, 15 ಗ್ರೆನೇಡ್‍ಗಳು ಮತ್ತು ಪಾಕ್ ಕರೆನ್ಸಿ ಇದರಲ್ಲಿ ಸೇರಿವೆ. ಆದರೆ, ಅಡಗುತಾಣದಲ್ಲಿ ಯಾರೊಬ್ಬರೂ ಪತ್ತೆಯಾಗಿಲ್ಲ.