ಸವಾಲಿನ ವರ್ಷದಲ್ಲಿ ಜನ ಕಲ್ಯಾಣಕ್ಕೆ ಪ್ರಾಮಾಣಿಕ ಪ್ರಯತ್ನ : ಸ್ವಾತಂತ್ರ್ಯೋತ್ಸವದಲ್ಲಿ ಸಚಿವ ವಿ.ಸೋಮಣ್ಣ

15/08/2020

ಮಡಿಕೇರಿ ಆ.15 : ಸ್ವಾತಂತ್ರ್ಯ ಹೋರಾಟದ ಶತಮಾನದ ಇತಿಹಾಸ ಇಂದಿನ ಅಭಿವೃದ್ಧಿಗೆ ಮುನ್ನೋಟವಾಗಲಿದ್ದು, ಸವಾಲಿನ ವರ್ಷದಲ್ಲಿ ಜನಕಲ್ಯಾಣಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ರಾಜ್ಯ ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ನಗರದ ಕೋಟೆ ಆವರಣದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸರಳ ಸಮಾರಂಭದಲ್ಲಿ ತ್ರ್ರಿವರ್ಣ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹನೀಯರ ಆದರ್ಶವನ್ನು ಗೌರವಿಸಿ ಸಾಮರಸ್ಯದಿಂದ ಬಾಳ್ವೆ ನಡೆಸುವ ಜವಾಬ್ದಾರಿ ನಮ್ಮದೆಂದು ಅಭಿಪ್ರಾಯಿಸಿದರು.
ಕೊಡಗು ಜಿಲ್ಲೆ ಸ್ವಾತಂತ್ರ್ಯ ಹೋರಾಟಕ್ಕೆ ಹಲ ನಾಯಕರನ್ನು ನೀಡಿದೆಯಲ್ಲದೆ, ಭಾರತೀಯ ಸೈನ್ಯಕ್ಕೆ ವೀರ ಸೇನಾನಿಗಳನ್ನು ನೀಡಿದ್ದು, ಈ ಪೈಕಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರುಗಳು ಭಾರತೀಯ ಸೇನಾ ಇತಿಹಾಸದ ಮರೆಯಲಾಗದ ರತ್ನಗಳೇ ಆಗಿದ್ದಾರೆಂದು ನುಡಿದ ಸಚಿವರು, ಕೊಡಗು ಭಾರತದ ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು,
ಸಮಸ್ಯೆ ಮತ್ತು ಸವಾಲುಗಳ ವರ್ಷ- ಪ್ರಸಕ್ತ ಸಾಲು ಸಮಸ್ಯೆ ಮತ್ತು ಸವಾಲುಗಳ ವರ್ಷವೇ ಆಗಿದೆ. ಒಂದು ಕಡೆ ಇಡೀ ವಿಶ್ವವನ್ನೆ ಆವರಿಸಿದ ಕೊರೊನಾ ಮಹಾಮಾರಿ, ಮತ್ತೊಂದೆಡೆ ಪ್ರಾಕೃತಿಕ ವಿಕೋಪವೆಂದು ತಿಳಿಸಿದ ಅವರು, ಕೊರೊನಾ ಸಂಕಷ್ಟದ ಅವಧಿಯಲ್ಲಿ ಸರ್ಕಾರ ಸಮಾಜದ ಎಲ್ಲಾ ಸ್ತರಗಳ ಮಂದಿಗೆ ನೆರವನ್ನು ಒದಗಿಸುವ ಕಾರ್ಯವನ್ನು ನಡೆಸಿದೆ. ಈ ಎಲ್ಲಾ ಸಮಸ್ಯೆ ಹಾಗೂ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದರ ಜೊತೆ ಜೊತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನ ಕಲ್ಯಾಣಕ್ಕಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ರಾಜ್ಯದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು,
ಕೋಟೆ ಸಂರಕ್ಷಣೆಗೆ 10.76 ಕೋಟಿ- ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಇತಿಹಾಸ ಪ್ರಸಿದ್ಧ ಹಳೇ ಕೋಟೆಯನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತೀಯ ಪುರಾತತ್ವ ಇಲಾಖೆ ಮೂಲಕ ರಕ್ಷಣಾ ಕಾರ್ಯವನ್ನು ಕೈಗೊಳ್ಳ್ಳಲಾಗಿದೆ. ಈ ಸಂಬಂಧ ಸರ್ಕಾರದಿಂದ 10.76 ಕೋಟಿ ರೂ.ಗಳನ್ನು ಭಾರತೀಯ ಪುರಾತತ್ವ ಇಲಾಖೆಗೆ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಸೂರು ಕಳೆದುಕೊಂಡವರಿಗೆ 14.98 ಕೋಟಿ ಪರಿಹಾರ- ಕಳೆದ 2019ರ ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆÉದುಕೊಂಡ, ಹಾನಿಗೊಳಗಾದ ಒಟ್ಟು 2416 ಮನೆಗಳಿಗೆ 14.98 ಕೋಟಿ ರೂ.ಗಳ ಪರಿಹಾರವನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಈಗಾಗಲೆ ಬಿಡುಗಡೆ ಮಾಡಲಾಗಿದೆಯೆಂದು ಸಚಿವ ಸೋಮಣ್ಣ ತಿಳಿಸಿ, 2018ರ ವಿಕೋಪಕ್ಕೆ ಸಂಬಂಧಿಸಿದಂತೆ ಕರ್ಣಂಗೇರಿಯಲ್ಲಿ 35 ಮನೆಗಳನ್ನು, ಜಂಬೂರಿನಲ್ಲಿ 383 ಮತ್ತು ಮದೆನಾಡಿನಲ್ಲಿ 80 ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆÀಯೆಂದು ಮಾಹಿತಿ ನೀಡಿದರು.
ಅತಿವೃಷ್ಟಿಯಿಂದ 389.34 ಕೋಟಿ ಹಾನಿ- ಪ್ರಸಕ್ತ ಸಾಲಿನ ಮುಂಗಾರಿನ ಅತಿವೃಷ್ಠಿಯಿಂದ 389.34 ಕೋಟಿ ಮೌಲ್ಯದ ವಿವಿಧ ಇಲಾಖೆಗಳ ಮೂಲ ಸೌಲರ್ಯಗಳಿಗೆ ಹಾನಿಯಾಗಿದ್ದು, ಇವುಗಳ ಪುನರ್ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ. ಇದರೊಂದಿಗೆ ಭಾರೀ ಮಳೆಯಿಂದ 342 ವಾಸದ ಮನೆಗಳಿಗೆ ಮತ್ತು 34,170 ಹೆಕ್ಟೇರ್ ಬೆಳೆಗೆ ಹಾನಿಯಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಮತ್ತು ನಿರಾಶ್ರಿತರ ಬದುಕನ್ನು ಕಟ್ಟಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರು.
ಗೌರವ ರಕ್ಷೆ ಸ್ವೀಕಾರ- ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸಿವಿಲ್ ಪೊಲೀಸ್, ಡಿಎಆರ್, ಅರಣ್ಯ ಇಲಾಖೆ, ಗೃಹ ರಕ್ಷಕ ದಳದಿಂದ ನಡೆದ ಪಥ ಸಂಚಲನದ ಗೌರವ ರಕ್ಷೆಯನ್ನು ಉಸ್ತುವಾರಿ ಸಚಿವರು ಸ್ವೀಕರಿಸಿದರು.
ಸಮಾರಂಭದಲ್ಲಿ ಶಾಸಕÀ ಎಂ.ಪಿ.ಅಪ್ಪಚ್ಚುರಂಜನ್, ಎಂಎಲ್‍ಸಿಗಳಾದ ಸುನಿಲ್ ಸುಬ್ರಮಣಿ, ವೀಣಾಅಚ್ಚಯ್ಯ, ಸಂಸದ ಪ್ರತಾಪಸಿಂಹ, ಜಿಪಂ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಡಿಕೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್‍ಪಿ ಕ್ಷಮಾ ಮಿಶ್ರಾ, ಸಿಇಒ ಲಕ್ಷ್ಮೀಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.