ಕಾಡಾನೆ ದಾಳಿಗೆ ವೃದ್ಧೆ ಬಲಿ : ಮೋದೂರು ಗ್ರಾಮಸ್ಥರ ಅಸಮಾಧಾನ

17/08/2020

ಮಡಿಕೇರಿ ಆ.17 : ಕಾಡಾನೆ ದಾಳಿಯಿಂದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾ.ಪಂ ವ್ಯಾಪ್ತಿಯ ಮೋದೂರಿನಲ್ಲಿ ನಡೆದಿದೆ.
ಹಿರಿಯ ಕಾಫಿ ಬೆಳೆಗಾರರಾದ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಬಿದ್ದಂಡ ಕುಟುಂಬದ ದಿ.ಬಿ.ಕೆ.ಮುತ್ತಣ ಅವರ ಪತ್ನಿ ನೀನಾ ಮುತ್ತಣ್ಣ(76) ಅವರೇ ಮೃತ ದುರ್ದೈವಿ.
ಸಂಜೆ ತಮ್ಮ ತೋಟದಲ್ಲಿ ವಾಯು ವಿಹಾರ ಮಾಡುತ್ತಿದ್ದಾಗ ಒಂಟಿ ಸಲಗ ದಾಳಿ ಮಾಡಿ ವೃದ್ಧೆಯನ್ನು ಬಲಿ ಪಡೆದಿದೆ. ಮೃತರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಮನೆಗೆ ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಹಾಗೂ ಸೋಮವಾರಪೇಟೆ ತಾ.ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥರು ಮೋದೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ನೆಲೆಸಿದ್ದು, ನಿತ್ಯ ಆತಂಕದಿಂದಲೇ ದಿನ ಕಳೆಯುವಂತ್ತಾಗಿದೆ, ಇದಕ್ಕೊಂದು ಶಾಶ್ವತ ಪರಿಹಾರದ ಅಗತ್ಯವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಂದ್ರಕಲಾ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಸೂಚಿಸದೆ ಮೀನ, ಮೇಷ ಎಣಿಸುತ್ತಿರುವುದು ಸರಿಯಲ್ಲ. ಆನೆ, ಮಾನವ ಸಂಘರ್ಷದಿಂದ ಹಲವು ಸಾವು, ನೋವುಗಳು ಸಂಭವಿಸಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಕ್ಷಣ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಕರೆ ಮಾಡಿ ಮಾತನಾಡಿದ ಮಣಿಉತ್ತಪ್ಪ ಅವರು ಕಾಡಾನೆಗಳ ಹಾವಳಿ ಕುರಿತು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಮೋದೂರು ಸುತ್ತಮುತ್ತ ಸುಮಾರು 13 ರಿಂದ 15 ಕಾಡಾನೆಗಳು ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಶೀಘ್ರ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲು ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ಹೇಳಿದರು. ಮೃತರ ಕುಟುಂಬಕ್ಕೆ ಪರಿಹಾರಧನ ನೀಡುವುದಾಗಿ ಭರವಸೆ ನೀಡಿದರು.
ಕೆದಕಲ್ ಗ್ರಾ.ಪಂ ಸದಸ್ಯ ದೇವಿ ಪ್ರಸಾದ್, ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಮೇಶ್, ಸುಂಟಿಕೊಪ್ಪ ಜೆಸಿ ಕಾರ್ಯದರ್ಶಿ ಮುರುಗೇಶ್ ಮತ್ತಿತರರು ಹಾಜರಿದ್ದರು.