ಸರ್ಕಾರ ಬೆಳೆಗಾರರ ನೆರವಿಗೆ ಬರಲಿ : ಎಂ.ಬಿ.ದೇವಯ್ಯ ಒತ್ತಾಯ

ಮಡಿಕೇರಿ ಆ.17 : ಪ್ರಸಕ್ತ ಸಾಲು ಸೇರಿದಂತೆ ಕಳೆದ ಮೂರು ವರ್ಷಗಳ ಮುಂಗಾರಿನ ಅವಧಿಯ ಅತಿವೃಷ್ಠಿಯಿಂದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸಿಗೆ ಅಪಾರ ಹಾನಿ ಸಂಭವಿಸಿದ್ದು, ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಅಗತ್ಯ ಪರಿಹಾರ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕೆಂದು ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಭಾರೀ ಮಳೆಯಿಂದ ಬೆಟ್ಟ, ಗುಡ್ಡಗಳು ಕುಸಿದು ಅಪಾರ ಹಾನಿಯುಂಟಾಗಿದ್ದರೆ, ಅತಿಯಾದ ಮಳೆಯಿಂದ ತೋಟಗಳಲ್ಲಿನ ಕಾಫಿ ಉದುರಿ, ಮರಗಳು ಬಿದ್ದು ಕರಿಮೆಣಸಿನ ಬಳ್ಳಿಗಳು ನಾಶವಾಗಿ ಅಪಾರ ಹಾನಿ ಸಂಭವಿಸಿದೆ. ಇದರ ಬಗ್ಗೆ ನೈಜ ಮಾಹಿತಿಗಳನ್ನು ಅರಿತು, ಬೆಳೆಗಾರರಿಗೆ ಶಾಶ್ವತ ಪರಿಹಾರವನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಜ್ಞರು ಮತ್ತು ಬೆಳೆಗಾರರನ್ನು ಒಳಗೊಂಡಂತೆ ‘ಪರಿಶೀಲನಾ ಸಮಿತಿ’ ರಚಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.
ಮುಂಗಾರಿನ ಅವಧಿಯಲ್ಲಿ ವಾರದ ಅವಧಿಯ ಭಾರೀ ಮಳೆಯಿಂದ ತೋಟಗಳಲ್ಲಿನ ಕಾಫಿ ಉದುರಿ ಹೋಗಿದೆ. ಕಳೆದ ಒಂದೂವರೆ ದಶಕಗಳಿಂದ ಕಾಫಿ ಧಾರಣೆಯಲ್ಲಿಯೂ ಹೆಚ್ಚಳವಾಗದೆ, ಕಾರ್ಮಿಕರ ವೇತನ, ರಸಗೊಬ್ಬರ, ಕೀಟನಾಶಗಳ ಬೆಳೆ ಹೆಚ್ಚಳದಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬೆಳೆಗಾರನಿಗೆ ತೊಟಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಜಿಲ್ಲೆಯ ಸಾಕಷ್ಟು ಬೆಳೆಗಾರರು ಕಾಫಿ ಕೃಷಿಯಿಂದ ವಿಮುಖರಾಗಿ ತೋಟಗಳು ಪಾಳು ಬೀಳುತ್ತಿವೆ. ಹಲವು ಬೆಳೆಗಾರುಉ ತೋಟಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಬೆಳೆಗಾರನ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಿ, ಕೊಡಗಿನ ಅರೇಬಿಕಾ, ರೋಬಸ್ಟಾ ಕಾಫಿ ಕೃಷಿಯ ಸಂರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದ ದೇವಯ್ಯ ಅವರು, ಬೆಳೆಗಾರರ ನೈಜ ಸಮಸ್ಯೆಗಳನ್ನು ಅರಿತು ಪರಿಹಾರ ಒದಗಿಸುವ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಬೇಕೆಂದು ಒತ್ತಾಯಿಸಿದರು.
::: ಪ್ರಸ್ತಾವನೆಗೆ ಆಗ್ರಹ :::
ಅತಿವೃಷ್ಟಿಯಿಂದ ಕಾಫಿ, ಕರಿಮೆಣಸು ಕೃಷಿಗೆ ಉಂಟಾಗಿರುವ ಹಾನಿಯನ್ನು ಅಂದಾಜಿಸಲು ಶೀಘ್ರವೇ ಕಾಫಿ ಮಂಡಳಿ ಮತ್ತು ಕಂದಾಯ ಇಲಾಖೆಗಳು ತಕ್ಷಣ ಸರ್ವೇ ಕಾರ್ಯಗಳನ್ನು ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ಕೆಲಸವಾಗಬೇಕಾಗಿದೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಗಮನ ಸೆಳೆಯುವ ಕಾರ್ಯವನ್ನು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಸದರ ಸಹಕಾರದೊಂದಿಗೆ ಮಾಡಲು ಪ್ರಯತ್ನಿಸುವುದಾಗಿ ಸ್ಪಷ್ಟಪಡಿಸಿದರು.
::: ಸಭೆ ಕರೆಯಿರಿ :::
ಕೊಡಗು ಜಿಲ್ಲೆಯ ಬೆಳೆಗಾರರು ಪ್ರಾಕೃತಿಕ ವಿಕೋಪದೊಂದಿಗೆ ವನ್ಯಜೀವಿಗಳ ಹಾವಳಿಯಿಂದ ಸಂಕಷ್ಟ್ಟಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ಸಂಸದರು ಕಾಳಜಿ ವಹಿಸಿ, ಸಮಸ್ಯೆಯ ಬಗೆಹರಿಕೆಗೆ ಮಾರ್ಗಗಳನ್ನು ಕಂಡುಕೊಳ್ಳಲು ಸಭೆಕರೆಯುವಂತೆ ದೇವಯ್ಯ ಅವರು ಒತ್ತಾಯಿಸಿದರು.
ಸಂಘದ ನಿರ್ದೇಶಕ ರಮೇಶ್ ಮುದ್ದಯ್ಯ ಅವರು ಮಾತನಾಡಿ, ಜಿಲ್ಲೆಯ ಬೆಳೆಗಾರ ಕಾಡಾನೆ, ಹುಲಿ ಮೊದಲಾದ ವನ್ಯ ಪ್ರಾಣಿಗಳ ಹಾವಳಿಯಿಂದ ಬೇಸತ್ತಿದ್ದಾನೆ. ಕಾಡಾನೆಗಳ ಉಪಟಳದಿಂದ ತಾನು ಬೆಳೆದ ಕೃಷಿ ಫಸಲನ್ನು ಕಳೆದುಕೊಳ್ಳುತ್ತಿದ್ದಾನೆ. ಅರಣ್ಯ ಇಲಾಖೆ ಒಂದಷ್ಟು ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ಹೊರತು ಶಾಶ್ವತ ಪರಿಹಾರ ಕ್ರಮಗಳು ನಡೆಯುತ್ತಿಲ್ಲವೆಂದು ಬೆÉೀಸರ ವ್ಯಕ್ತಪಡಿಸಿದರು.
ಕಾಡಾನೆಗಳು ಸೇರಿದಂತೆ ವನ್ಯಜೀವಿಗಳ ಸಂಖ್ಯೆ ನಿಗದಿತ ಮಿತಿಯನ್ನು ಮೀರಿ ಹೆಚ್ಚಳವಾಗಿರುವುದರಿಂದ ಅವುಗಳಿಂದ ಬೆಳೆಗಾರ ತೊಂದರೆಗೆ ಒಳಗಾಗಿದ್ದಾನೆ. ಆಫ್ರಿಕದ ಕೆಲವು ದೇಶಗಳಲ್ಲಿ ಕಾಡಾನೆಗಳ ಸಂಖ್ಯೆಯ ಹೆಚ್ಚಳಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿ ವನ್ಯಜೀವಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಸಂಘದ ನಿರ್ದೇಶಕ ಎನ್.ಕೆ.ಅಯ್ಯಣ್ಣ ಅವರು ಮಾತನಾಡಿ, ಕಾಫಿ ಮಂಡಳಿಯ ಅಧಿಕಾರಿಗಳು ಮಳೆಹಾನಿ ಕಾಫಿ ತೋಟಗಳ ಪರಿಶೀಲನೆಗೆ ಮುಂದಾಗದೆ ಕೇವಲ ಗುಡ್ಡ ಕುಸಿತದ ಪ್ರದೇಶಗಳಿಗಷ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಪಿ.ಸಿ.ಕಾವೇರಪ್ಪ ಉಪಸ್ಥಿತರಿದ್ದರು.
