ಪಾಲೆಮಾಡುವಿನಲ್ಲಿ ಅರ್ಥಪೂರ್ಣವಾಗಿ ಜರುಗಿದ 74ನೇ ಸ್ವಾತಂತ್ರ್ಯ ದಿನಾಚರಣೆ

17/08/2020

ಮಡಿಕೇರಿ ಆ. 17 : ಕಾನ್ಷಿರಾಮ್‍ನಗರ ಪಾಲೆಮಾಡುವಿನಲ್ಲಿ ಅಂಬೇಡ್ಕರ್ ಯುವಕ ಸಂಘ ಹಾಗೂ ಗ್ರಾಮದ ನಿವಾಸಿಗಳಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗ್ರಾ. ಪಂ. ಪಿಡಿಓ ಅಬ್ದುಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಾತೃತ್ವ, ಸಮಾನತೆಯಿಂದ ಕೂಡಿದ ದೇಶ ನಮ್ಮದು, ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವಾರು ದಾರ್ಶನಿಕರ ಫಲವಾಗಿ ನಾವು ಇಂದು ಸ್ವತಂತ್ರರಾಗಿದ್ದೇವೆ ಎಂದರು.
ಪ್ರಸ್ತುತ ದಿನಗಳಲ್ಲಿ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಮಹತ್ವದಾಗಿದೆ. ಅಂಬೇಡ್ಕರ್ ಅವರ ಸಮಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಅಬ್ದುಲ್ ಕರೆ ನೀಡಿದರು.
ಗ್ರಾಮದ ಮುಖ್ಯಸ್ಥ ಹಾಗೂ ಭೂಮಿ ಮತ್ತು ವಸತಿ ಹೋರಾಟಗಾರರ ಸಮಿತಿಯ ರಾಜ್ಯ ಕಾರ್ಯದರ್ಶಿ ಮೊಣ್ಣಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬಡ ವರ್ಗದ ಜನರು ಎಷ್ಟರ ಮಟ್ಟಿಗೆ ಸ್ವಾತಂತ್ರ್ಯರಾಗಿದ್ದಾರೆ ಎಂಬುದನ್ನು ಪ್ರತಿಯೊಬ್ಬರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಅಂಬೇಡ್ಕರ್ ಅವರ ಸಂವಿಧಾನ ವನ್ನು ಜಾರಿ ಗೊಳಿಸುವ ಮೂಲಕ ಸಮಾಜದಲ್ಲಿ ಪ್ರತಿಯೊಬ್ಬರು ಸಮಾನರು ಎಂಬುದನ್ನು ತೊರಿಸಬೇಕಾಗಿದೆ ಎಂದರು.
ಹೊಟೆಕಾಡು ಪ್ರಾಥಮಿಕ ಶಾಲೆಯ ಶಿಕ್ಷಕಿ ಸೌಮ್ಯ ಹಾಗೂ ಶಿಕ್ಷಕ ಕುಮಾರ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದ ಹಾಗೂ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾನ್ಷಿರಾಮ್‍ನಗರದಲ್ಲಿ ಸೋಮವಾರ ಹಾಗೂ ಶುಕ್ರವಾರ 10.30 ರಿಂದ 11.30ರ ವರೆಗೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ 15 ವಿದ್ಯಾರ್ಥಿಗಳಿಗೆ ಸಂವಿಧಾನದ ಪುಸ್ತಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು 6ನೇ ತರಗತಿ ವಿದ್ಯಾರ್ಥಿ ಸಫಾ ಫಾತಿಮ ಅವರ ಭಾಷಣದ ಮೂಲಕ ಮುಕ್ತಾಯಗೊಳಿಸಲಾಯಿತು.
ಗ್ರಾ. ಪಂ. ಮಾಜಿ ಸದಸ್ಯೆ ಕುಸುಮ, ಪೊಲೀಸ್ ಸಿಬ್ಬಂದಿ ರಾಜೇಶ್, ಜಯನ್, ಧರ್ಮಸ್ಥಳ ಸಂಘದ ಕಾವೇರಿ, ಗ್ರಾಮದ ಹಿರಿಯ ಹೋರಾಟಗಾರ ಸುರೇಶ್, ಜಾಜು ಮತ್ತು ಅಂಬೇಡ್ಕರ್ ಯುವಕ ಸಂಘದ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಇದ್ದರು.