ಗರ್ಭಿಣಿ ಕಾಡಾನೆ ದಾರುಣ ಸಾವು : ಎಡೂರಿನಲ್ಲಿ ಘಟನೆ

17/08/2020

ಮಡಿಕೇರಿ ಆ.17 : ಕಳೆದ ಎರಡು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತಿದ್ದ ಗರ್ಭಧರಿಸಿ ನಾಲ್ಕು ತಿಂಗಳಾಗಿದ್ದ ಕಾಡಾನೆಯೊಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಮ್ಮತಿ ಒಂಟಿಯಂಗಡಿ ಸಮೀಪದ ಎಡೂರು ಗ್ರಾಮದಲ್ಲಿ ನಡೆದಿದೆ.
ಹೊಟ್ಟೆ ನೋವಿನ ಕಾರಣದಿಂದ ಗ್ರಾಮದ ಕಾಫಿ ತೋಟದಲ್ಲಿ ಚೀರಿಡುತ್ತಿದ್ದ ಹೆಣ್ಣಾನೆ ಇಳಿಜಾರು ಪ್ರದೇಶದಲ್ಲಿ ಕಾಲುಜಾರಿ ಬಿದ್ದು ಮರಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ಮೇಲೇಳಲಾಗದೆ ಅಲ್ಲೇ ಮೃತ ಪಟ್ಟಿದೆ ಎಂದು ಹೇಳಲಾಗಿದೆ.
ಗರ್ಭಿಣಿ ಕಾಡಾನೆಯ ಅರಣ್ಯ ರೋಧನದ ಬಗ್ಗೆ ತೋಟದ ಕಾರ್ಮಿಕರು ಹಾಗೂ ವನ್ಯಜೀವಿ ಹವ್ಯಾಸಿ ಛಾಯಾಗ್ರಾಹಕ ಮಾಚು ಮಾಚಯ್ಯ ಅರಣ್ಯ ಅಧಿಕಾರಿಗಳ ಗಮನ ಸೆಳೆದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದರು. ಆದರೆ ಹೆಣ್ಣಾನೆ ಮೃತ ಪಟ್ಟಿರುವುದು ದೃಢವಾದ ಕಾರಣ ತೋಟದಲ್ಲೇ ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಜಾರಿ ಬಿದ್ದ ಪರಿಣಾಮ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟಾಗಿ ಆನೆ ಮೃತಪಟ್ಟಿದೆ ಎಂದು ವೈದ್ಯಾಧಿಕಾರಿ ಮುಜೀಬ್ ಸ್ಪಷ್ಟಪಡಿಸಿದರು.