ಮುಖ್ಯಮಂತ್ರಿಯನ್ನು ಭೇಟಿಯಾದ ಅಖಂಡ

18/08/2020

ಬೆಂಗಳೂರು ಆ.18 : ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕೆ.ಜಿ.ಹಳ್ಳಿ ಗಲಭೆಯ ಬಗ್ಗೆ ವಿವರ ನೀಡಿದರು.
ಘಟನೆಯ ಬಳಿಕ ಮೊದಲ ಬಾರಿಗೆ ಶಾಸಕ ಅರವಿಂದ ಲಿಂಬಾವಳಿ ಜೊತೆ ಬಂದು ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಅಖಂಡ ಶ್ರೀನಿವಾಸ್, ಗಲಭೆ ಕುರಿತು ಬಿಎಸ್‍ವೈ ಜೊತೆ ಚರ್ಚೆ ನಡೆಸಿದರು. ಈ ಗಲಭೆ ಪ್ರಮುಖ ಕಾರಣ ಯಾರು, ಗಲಭೆ ನಡೆದ ದಿನದಿಂದ ಇಲ್ಲಿಯವರೆಗೂ ಆಗಿರುವ ಬೆಳವಣಿಗೆ, ಪ್ರಕರಣದ ಕುರಿತು ತನಿಖೆ ಬಗ್ಗೆ ಚರ್ಚೆ ಮಾಡಿದ್ದಾರೆ. ಎಸ್‍ಡಿಪಿಐ ಸಂಘಟನೆಯ ಕೈವಾಡ ಹಾಗೂ ಸ್ಥಳೀಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.
ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ಮುಖ್ಯಮಂತ್ರಿ ಬಳಿ ತಮಗೆ ಭದ್ರತೆ ಹೆಚ್ಚಳಕ್ಕೆ ಮನವಿ ಮಾಡಿದ್ದೇನೆ. ಗಲಭೆಯ ಹಿಂದೆ ಯಾರೇ ತಪ್ಪಿತಸ್ಥರಿದ್ದರೂ ಅವರನ್ನು ಬಂಧಿಸಲು ಮನವಿ ಮಾಡಿದ್ದೇನೆ ಎಂದರು.