ಸೇನೆ ದಾಳಿಗೆ ಲಷ್ಕರ್ ಕಮಾಂಡರ್ ಬಲಿ

ಶ್ರೀನಗರ ಆ.17 : ಬಾರಾಮುಲ್ಲಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಉಗ್ರರ ದಾಳಿಗೆ ಸಿಆರ್‍ಪಿಎಫ್‍ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾದ ಬೆನ್ನಲ್ಲೇ ಸೇನೆ ಇದೀಗ ಲಷ್ಕರ್ ಕಮಾಂಡರ್ ಉಗ್ರ ಸಜ್ಜದ್ ನನ್ನು ಹೊಡೆದುರುಳಿಸಿದೆ.
ಸೇನಾ ಮೂಲಗಳ ಪ್ರಕಾರ ಎನ್ ಕೌಂಟರ್ ನಲ್ಲಿ ಭಾರತೀಯ ಯೋಧರು ಲಷ್ಕರ್ ಎ ತೊಯ್ಬಾದ ಉನ್ನತ ಕಮಾಂಡರ್ ಸಜ್ಜಾದ್‍ನನ್ನು ಕೊಂದು ಹಾಕಿದ್ದಾರೆ. ಈ ಬಗ್ಗೆ ಜಮ್ಮುಕಾಶ್ಮೀರದ ಐಜಿ ವಿಜಯ್ ಕುಮಾರ್ ಅವರು ಮಾಹಿತಿ ನೀಡಿದ್ದು, ಲಷ್ಕರ್ ಎ ತೊಯ್ಬಾದ ಸಜ್ಜಾದ್ ಅಲಿಯಾಸ್ ಹೈದರ್‍ನನ್ನು ಹತ್ಯೆ ಮಾಡಲಾಗಿದೆ. ಇದು ಭದ್ರತಾ ಪಡೆ ಮತ್ತು ಪೊಲೀಸರ ಮಹತ್ವದ ಸಾಧನೆ ಎಂದು ಹೇಳಿದ್ದಾರೆ.
ಸಜ್ಜದ್ ಹಾಗೂ ಇನ್ನೋರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಮೃತರ ಬಳಿ ಇದ್ದ ಒಂದು ಎಕೆ-47 ರೈಫಲ್ ಮತ್ತು ಎರಡು ಪಿಸ್ತೂಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಉಗ್ರನಿಗಾಗಿ ಹುಡುಕಾಟ ನಡೆದಿದೆ ಎಂದು ಸಿಆರ್‍ಪಿಎಫ್ ತಿಳಿಸಿದೆ. ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಇಂದು ಬೆಳಗ್ಗೆಯಿಂದಲೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‍ಕೌಂಟರ್ ನಡೆಯುತ್ತಿದೆ. ಉಗ್ರರ ದಾಳಿಗೆ ಸಿಆರ್‍ಪಿಎಫ್‍ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದರು.
