ಮಡಿಕೇರಿ ತಾ.ಪಂ ಸಾಮಾನ್ಯ ಸಭೆಯಲ್ಲಿ ಮಳೆಹಾನಿಯದ್ದೇ ಚರ್ಚೆ

18/08/2020

ಮಡಿಕೇರಿ ಆ. 18 : ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಮಡಿಕೇರಿ ತಾಲ್ಲೂಕಿನಲ್ಲಿ ಸಾಕಷ್ಟು ಹಾನಿಯಾಗಿದ್ದು, ಈ ಸಂಬಂಧ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಎಂಜಿನಿಯರ್‍ಗೆ ತಾ.ಪಂ. ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್ ಅವರು ಸೂಚಿಸಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾ.ಪಂ.ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ, ಸೇತುವೆ, ಶಾಲೆ, ಅಂಗನವಾಡಿ ಹಾಗೆಯೇ ಸರ್ಕಾರಿ ಕಟ್ಟಡಗಳು ಹೀಗೆ ಮಳೆಯಿಂದ ಹಾನಿಯಾದ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಕ್ರೋಢೀಕರಿಸಿ ಅಂದಾಜು ಪಟ್ಟಿ ಸಲ್ಲಿಸುವಂತೆ ಅವರು ಸೂಚಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ರಾಜ್ ಎಇಇ ಶ್ರೀಕಂಠಯ್ಯ ಅವರು ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಂದಾಜು ಪಟ್ಟಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ಅವರು ಮಾತನಾಡಿ ಈಗಾಗಲೇ ಬೆಳೆ ಸಮೀಕ್ಷೆ ಆರಂಭವಾಗಿದ್ದು, ಕೃಷಿಕರಿಗೆ ಬೆಳೆ ಸಮೀಕ್ಷೆ ಆಪ್ ಬಗ್ಗೆ ಮಾಹಿತಿ ನೀಡಿ ಪರಿಹಾರ ವಿತರಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ರೈತರಿಂದಲೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಸಮೀಕ್ಷೆ ಮಾಡಬಹುದಾಗಿದ್ದು, ಈ ಬಗ್ಗೆ ರೈತರಿಗೆ ಸಹಕಾರ ನೀಡಬೇಕು. ಬೆಳೆ ಹಾನಿ ಸಂಬಂಧಿಸಿದಂತೆ ಯಾವ ಕುಟುಂಬವು ಸಹ ಬಿಟ್ಟು ಹೋಗದಂತೆ ಗಮನಹರಿಸಬೇಕು ಎಂದು ತಾ.ಪಂ.ಅಧ್ಯಕ್ಷರು ನಿರ್ದೇಶನ ನೀಡಿದರು.
ಬೆಳೆ ಸಮೀಕ್ಷೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎ.ಸಿ.ಗಿರೀಶ್ ಅವರು ರೈತರು ತಮ್ಮ ಜಮೀನಿನಲ್ಲಿ ಬೆಳೆದ ವಿವಿಧ ಬೆಳೆಗಳ ಸಮೀಕ್ಷೆ ಕೈಗೊಳ್ಳಬೇಕಿದೆ. ಈ ಯೋಜನೆಯಿಂದ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಳೆ ಕಟಾವು ಪ್ರಯೋಗ ನಡೆಸಲು, ಕನಿಷ್ಠ ಬೆಂಬಲ ಬೆಲೆ, ಬೆಳೆ ಸಾಲ, ಬೆಳೆ ವಿಮೆ, ಆರ್‍ಟಿಸಿಯಲ್ಲಿ ವಿವರ ದಾಖಲಾತಿಗಾಗಿ ಕೈಗೊಳ್ಳುವುದಕ್ಕಾಗಿ ಆಗಸ್ಟ್, 24 ರವರೆಗೆ ಅವಧಿ ನೀಡಲಾಗಿದೆ ಎಂದರು.
ಈಗಾಗಲೇ ತಾಲೂಕಿನಲ್ಲಿ 100 ಖಾಸಗಿ ನಿವಾಸಿಗಳನ್ನು ಆಯ್ಕೆ ಮಾಡಲಾಗಿದ್ದು, ಹಂತ ಹಂತವಾಗಿ ತರಬೇತಿ ನೀಡಿ ನಿಗದಿತ ಸಮಯದಲ್ಲಿ ಸಮೀಕ್ಷೆ ನಡೆಸಲಾಗುವುದು. ರೈತರು ಸಹಕರಿಸುವಂತೆ ಮಡಿಕೇರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಎ.ಸಿ ಗಿರೀಶ್ ಅವರು ಸಭೆಗೆ ಮಾಹಿತಿ ನೀಡಿದರು.

ಮಡಿಕೇರಿ ತಾಲ್ಲೂಕಿನಲ್ಲಿ ಶೇ.70ರಷ್ಟು ಭತ್ತ ನಾಟಿ ಕಾರ್ಯವಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಗೆ ಭತ್ತದ ಗದ್ದೆಗೆ ಮರಳು, ಮಣ್ಣು ತುಂಬಿ ಹೋಗಿ ನಷ್ಟ ಉಂಟಾಗಿದ್ದಲ್ಲಿ ಪರಿಹಾರ ವಿತರಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ತಾ.ಪಂ.ಸದಸ್ಯರಾದ ಅಪ್ರು ರವೀಂದ್ರ ಅವರು ಕಳೆದ ಬಾರಿ ನಾಟಿ ಮಾಡಿ ನಷ್ಟ ಉಂಟಾಗಿದ್ದರೂ ಸಹ ಪರಿಹಾರ ವಿತರಿಸಿಲ್ಲ ಎಂದು ಅವರು ದೂರಿದರು.
ಪರಿಹಾರ ವಿತರಣೆಯಲ್ಲಿ ಮಾನವೀಯತೆ ತೋರಬೇಕು. ಅದನ್ನು ಬಿಟ್ಟು ಶೇ.100ರಷ್ಟು ಕಾನೂನು ಮಾಡುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ಮಾತನಾಡಿ, ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 81.53 ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ.3 ರಷ್ಟು ಫಲಿತಾಂಶ ಹೆಚ್ಚಾಗಿದೆ. ಮಕ್ಕಂದೂರು, ಗಾಳಿಬೀಡುವಿನ 2 ಸರ್ಕಾರಿ ಶಾಲೆಗಳಿಗೆ 100 ಶೇ. ಫಲಿತಾಂಶ ಬಂದಿದೆ. 6 ಅನುದಾನ ರಹಿತ ಶಾಲೆಗಳು ಶೇ.100 ರಷ್ಟು ಫಲಿತಾಂಶವನ್ನು ಪಡೆದಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ತಾ.ಪಂ.ಇಒ ಲಕ್ಷ್ಮೀ ಅವರು, ಕೋವಿಡ್-19 ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಸಹ ಶಿಕ್ಷಣ ಇಲಾಖೆಯು ವ್ಯವಸ್ಥಿತ ರೀತಿಯಲ್ಲಿ ಪರೀಕ್ಷೆ ಆಯೋಜಿಸಿ. ಉತ್ತಮ ಫಲಿತಾಂಶ ಪಡೆಯುವಲ್ಲಿ ಎಲ್ಲರೂ ಶ್ರಮಿಸಿದ್ದಾರೆ ಎಂದರು.
ಬಳಿಕ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅವರು, ಕೋವಿಡ್-19 ನಿಂದ ಕಲಿಕೆಯಲ್ಲಿ ಮಕ್ಕಳು ಹಿಂದುಳಿಯಬಾರದು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ‘ವಿದ್ಯಾಗಮ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಮಕ್ಕಳ ತಂಡವನ್ನು ಮಾಡಿ, ಸರ್ಕಾರದ ನಿರ್ದೇಶನದಂತೆ ಸಮುದಾಯ ಭವನ, ಗ್ರಾ.ಪಂ.ಸಭಾಂಗಣದಲ್ಲಿ ಪಠ್ಯ ವಿಷಯವನ್ನು ಬೋಧಿಸಲು ಕ್ರಮವಹಿಸಲಾಗಿದೆ. ‘ಸಂವೇದ’ ಎಂಬ ಖಾಸಗಿ ವಾಹಿನಿ ಮೂಲಕ ಮಕ್ಕಳಿಗೆ ಪಾಠ-ಪ್ರವಚನ ನಡೆಯುತ್ತಿವೆ ಎಂದರು. ಈ ಬಾರಿಯ ಮಳೆಯಿಂದಾಗಿ ತಾಲ್ಲೂಕಿನ 24 ಶಾಲೆಗಳಿಗೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಿನಾಥ್ ಅವರು ಮಡಿಕೇರಿ ತಾಲೂಕಿನಲ್ಲಿ 6 ಸಾವಿರ ಮಂದಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, 304 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 193 ವರದಿಗಳು ನಿರೀಕ್ಷಣೆಯಲ್ಲಿದೆ. 3 ಮರಣ ಪ್ರಕರಣಗಳು ವರದಿಯಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಈಗಾಗಲೇ 3 ಸಂಚಾರಿ ಆರೋಗ್ಯ ತಂಡಗಳು ಕಾರ್ಯಾಚರಿಸುತ್ತಿದ್ದು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಈ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 1 ಕೋವಿಡ್ ಆಸ್ಪತ್ರೆ, 3 ಕೋವಿಡ್ ಕೇರ್ ಸೆಂಟರ್ ಗಳನ್ನ ತೆರೆಯಲಾಗಿದೆ. 150 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆ ವ್ಯವಸ್ಥೆ ಇದೆ. 13 ವೆಂಟಿಲೇಟರ್ ಗಳಿದ್ದು 25 ವೆಂಟಿಲೇಟರ್ ಜೋಡಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ನವೋದಯ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಇದ್ದು, ಸೋಂಕಿತರನ್ನು ಕರೆತರಲು 1 ಆಂಬುಲೆನ್ಸ್ ಮತ್ತು ಆಸ್ಪತ್ರೆಯಿಂದ ಗುಣಮುಖರಾಗಿ ತೆರಳುವವರ ಪ್ರಯಾಣದ ಅನುಕೂಲಕ್ಕಾಗಿ 1 ಟಿ.ಟಿ.ವಾಹನ ವ್ಯವಸ್ಥೆ ಇದೆ ಎಂದು ಅವರು ಹೇಳಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್ ಅವರು ತೋಟಗಾರಿಕಾ ಬೆಳೆ ಪರಿಹಾರ ಸಂಬಂಧ ಶೇ.33 ಶೇ.ಗಿಂತ ಹೆಚ್ಚು ಹಾನಿ ಸಂಭವಿಸಿದ್ದಲ್ಲಿ ಗರಿಷ್ಠ 2 ಹೆಕ್ಟೇರ್ ಗೆ 36 ಸಾವಿರ ರೂ. ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು. ಮುಂದಿನ ವಾರದಿಂದ ಕಾಳು ಮೆಣಸು ಗಿಡವನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಉಪಾಧ್ಯಕ್ಷರಾದ ಸಂತು ಸುಬ್ರಮಣಿ ಅವರು ಮಾತನಾಡಿ ಕಾಳು ಮೆಣಸು ಗಿಡವನ್ನು ಎಲ್ಲರಿಗೂ ಸಮಾನವಾಗಿ ವಿತರಿಸಬೇಕು ಎಂದು ಅವರು ಸಲಹೆ ಮಾಡಿದರು.
ತಾಲ್ಲೂಕು ಸಿಡಿಪಿಒ ಅರುಂಧತಿ ಅವರು ಈ ಬಾರಿಯ ವ್ಯಾಪಕ ಮಳೆಯಿಂದಾಗಿ 25 ಅಂಗನವಾಡಿಗಳಿಗೆ ಹಾನಿಯುಂಟಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವನೆ ನೀಡಲಾಗಿದೆ ಎಂದು ಅವರು ಸಭೆಗೆ ತಿಳಿಸಿದರು.
‘ಮನೆಯಂಗಳದಲ್ಲಿ ಅಂಗನವಾಡಿ’ ಎಂಬ ಕಾರ್ಯಕ್ರಮ ಸಿದ್ಧ್ದವಾಗುತ್ತಿದ್ದು, ಈ ಸಂಬಂಧ ಅಂಗನವಾಡಿ ಸಿಬ್ಬಂದಿಗಳಿಗೆ ಸ್ಮಾರ್ಟ್‍ಫೆÇೀನ್ ಗಳು ಬಂದಿದ್ದು, ಸಿಮ್ ವಿತರಿಸಬೇಕಿದೆ. ಈ ಕುರಿತಂತೆ ಈಗಾಗಲೇ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಅವರು ಹೇಳಿದರು.
ಅಂಗನವಾಡಿ ಮಕ್ಕಳಿಗೆ ‘ಮನೆಯಲ್ಲಿಯೇ ಊಟ, ಮನೆಯಲ್ಲಿಯೇ ಪಾಠ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಅವರು ಕಳೆದ ಐದಾರು ತಿಂಗಳಿಂದ ಶಾಲೆಗಳಿಗೆ ರಜೆ ಇರುವುದರಿಂದ ಕೆಲವು ಶಾಲೆಗಳಲ್ಲಿ ಕಾಡು ಬೆಳೆದಿದೆ. ಅಲ್ಲದೆ ಕಸ ಕಡ್ಡಿಗಳು ತುಂಬಿದೆ. ಆದ್ದರಿಂದ ಪರಿಸರ ಸ್ವಚ್ಛಗೊಳಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.
ಕಳೆದ ಮೂರು ವರ್ಷಗಳಿಂದ ವಸತಿ ಯೋಜನೆ ಅನುಷ್ಠಾನಕ್ಕೆ ಹಣ ಬಿಡುಗಡೆಯಾಗುತ್ತಿರುವುದು ತಡವಾಗುತ್ತಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವರನ್ನು ಗಮನ ಸೆಳೆಯಬೇಕು ಎಂದು ನಾಗೇಶ್ ಕುಂದಲ್ಪಾಡಿ ಅವರು ಮನವಿ ಮಾಡಿದರು.

ಸದಸ್ಯರಾದ ಉಮಾ ಪ್ರಭು ಅವರು ಮಾತನಾಡಿ ಕೋವಿಡ್-19 ಸೋಂಕಿತರನ್ನು ತುಚ್ಚವಾಗಿ ಕಾಣಬಾರದು. ಮುನ್ನೆಚ್ಚರಿಕೆ ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಅದನ್ನು ಬಿಟ್ಟು ಇತರರನ್ನು ನೋಯಿಸಬಾರದು ಎಂದು ಅವರು ಸಲಹೆ ಮಾಡಿದರು.
ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಗೆ ಹಲವು ಕುಟುಂಬಗಳು ಮನೆ ಕಳೆದುಕೊಂಡಿದ್ದು, ಸದ್ಯ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಗಮನ ಸೆಳೆದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಿ.ಇ. ಶ್ರೀಧರ ಅವರು ತಾಲ್ಲೂಕಿನ ಸರ್ಕಾರಿ ಶಾಲೆಗಳ ಆರ್‍ಟಿಸಿ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವಂತೆ ಅವರು ಸಲಹೆ ಮಾಡಿದರು.