ಕುಶಾಲನಗರ ನದಿ ಹೂಳೆತ್ತಲು ಖರ್ಚು ಮಾಡಿದ ಹಣ ನೀರು ಪಾಲಾಗಿದೆ : ವಿ.ಪಿ.ಶಶಿಧರ್ ಆರೋಪ

18/08/2020

ಮಡಿಕೇರಿ ಆ.18 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹವನ್ನು ತಡೆಗಟ್ಟುವ ಕಾರಣವನ್ನು ನೀಡಿ, ನದಿಯ ಹೂಳೆತ್ತುವ ನೆಪವೊಡ್ಡಿ ಅವೈಜ್ಞಾನಿಕ ಕಾಮಗಾರಿ ನಡೆಸುವ ಮೂಲಕ 88 ಲಕ್ಷದಿಂದ 1 ಕೋಟಿ ರೂ.ಗಳಷ್ಟು ಹಣವನ್ನು ಪೋಲು ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಮುಖ ವಿ.ಪಿ.ಶಶಿಧರ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪಗಳನ್ನು ಮಾನವ ನಿರ್ಮಿತ ಕಾಮಗಾರಿಗಳಿಂದ ತಡೆಯಬಹುದು ಎನುವುದೇ ಹಾಸ್ಯಾಸ್ಪದ. ಹೀಗಿದ್ದೂ ಲಕ್ಷಾಂತರ ವ್ಯಯಿಸಿ ಕುಶಾಲನಗರದಲ್ಲಿ ಕಾವೇರಿ ನದಿಯಿಂದ ಹೂಳೆತ್ತುವ ಮತ್ತು ನದಿ ದಂಡೆಯ ಗಿಡಗಂಟಿಗಳನ್ನು ತೆಗೆಯುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ ಈ ಬಾರಿಯೂ ವಿವಿಧ ಬಡಾವಣೆÉಗಳ ಪ್ರವಾಹದ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಾಗಿಲ್ಲವೆಂದು ವ್ಯಂಗ್ಯವಾಡಿದರು.
ಕಾವೇರಿ ನದಿಯ ಹೂಳೆತ್ತಿರುವುದರಿಂದ ಕುಶಾಲನಗರದಲ್ಲಿ ಪ್ರವಾಹದ ಪ್ರಮಾಣ ಕಡಿಮೆಯಾಯಿತೆನ್ನುವ ಅರ್ಥಹೀನ ಹೇಳಿಕೆಯನ್ನು ಶಾಸಕ ಅಪ್ಪಚ್ಚು ರಂಜನ್ ಅವರು ನೀಡಿದ್ದಾರೆ. ಶಾಸಕರ ಬಗ್ಗೆ ತಮಗೆ ಅಸಮಾಧಾನವಿಲ್ಲ, ಆದರೆ ವಿಷಾದವಿದೆ. ಈ ಬಾರಿ ಪ್ರವಾಹ ಕಡಿಮೆಯಾಗಿರುವುದಕ್ಕೆ ಕಳೆದ ಸಾಲಿನಷ್ಟು ಮಳೆÉಯಾಗದಿರುವುದೇ ಕಾರಣವಾಗಿದೆ. ಅಷ್ಟೇ ಪ್ರಮಾಣದ ಮಳೆÉಯಾಗಿದ್ದರೆ ಮತ್ತಷ್ಟು ಪ್ರವಾಹದ ಅನಾಹುತಗಳು ಸಂಭವಿಸುತಿತ್ತೆಂದು ಶಶಿಧರ್ ಅಭಿಪ್ರಾಯಪಟ್ಟರು.
ನೀರು ಹರಿದು ಹೋಗುವ ನದಿಯಲ್ಲಿ ಎಂದಿಗೂ ಹೂಳು ತುಂಬುವುದಿಲ್ಲ. ನಿಂತ ನೀರಲ್ಲಿ ಹೂಳು ತುಂಬುವುದು ಸಾಮಾನ್ಯ. ಕುಶಾಲನಗರದಲ್ಲಿ ಕಾವೇರಿ ನದಿಯ ಹೂಳೆತ್ತುವ ಕಾಮಗಾರಿಯನ್ನು ಶಾಸಕರು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು ಎಂದು ಆರೋಪಿಸಿದ ಅವರು, ಈ ಹೂಳೆತ್ತುವ ಕಾಮಗಾರಿ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದಂತೆ ವ್ಯರ್ಥವಾಗಿದೆ ಎಂದು ಆರೋಪಿಸಿದರು.
ಕಾಮಗಾರಿ 15 ರಿಂದ 20 ದಿನಗಳ ಕಾಲ ನಡೆದಿರಬಹುದಾಗಿದ್ದು, ಅಂದಾಜು 300 ರಿಂದ 400 ಟಿಪ್ಪರ್‍ಗಳಷ್ಟು ಮಣ್ಣನ್ನು ಹೊರ ತೆಗೆಯಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ, ಇಂತಹ ವಿಚಾರಗಳ ಬಗ್ಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೂ ಯಾವುದೇ ತಿಳುವಳಿಕೆಯೂ ಇಲ್ಲವೆಂದು ಶಶಿಧರ್ ಟೀಕಿಸಿದರು. ಕಾಮಗಾರಿಯ ಬಗ್ಗೆ ಅಧಿಕೃತವಾಗಿ ಮಾಹಿತಿ ಒದಗಿಸಬೇಕಾದ ನೀರಾವರಿ ಇಲಾಖೆ ಮೌನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಶಾಲನಗರದಲ್ಲಿ ಈ ಹಿಂದೆ ಬಡಾವಣೆಗಳು ಬೆಳೆದಿರಲಿಲ್ಲ, ಜನಸಂಖ್ಯೆಯೂ ಈ ಪ್ರಮಾಣದಲ್ಲಿ ಇರಲಿಲ್ಲ. ಪ್ರಸ್ತುತ ನದಿ ಪಾತ್ರದಲ್ಲಿ ಸಾಕಷ್ಟು ಪ್ರದೇಶ ಒತ್ತುವರಿಯಾಗಿದ್ದು, ಪ್ರಭಾವಿಗಳ ಪ್ರಭಾವದಿಂದ ಬಡಾವಣೆಗಳು ನಿರ್ಮಾಣವಾಗಿದೆ. ಇದೇ ಪ್ರವಾಹಕ್ಕೆ ಕಾರಣವಾಗಿದೆ ಎಂದು ಶಶಿಧರ್, ಇಂತಹ ಕಟು ಸತ್ಯ ಗೊತ್ತಿದ್ದು ಶಾಸಕರು ಮೌನವಾಗಿರುವುದು ವ್ಯವಸ್ಥೆಯ ಅಣಕವಲ್ಲವೇ ಎಂದು ಪ್ರಶ್ನಿಸಿದರು.
ಪ್ರವಾಹ ತಡೆಯುವ ಕಾರಣವನ್ನು ನೀಡಿ ಪೋಲು ಮಾಡಿರುವ ಲಕ್ಷಾಂತರ ರೂಪಾಯಿಗಳ ಬಗ್ಗೆ ಶಾಸಕರೊದಿಗೆ ಚರ್ಚೆಗೆ ತಾವು ಸಿದ್ಧರಿರುವುದಾಗಿ ಇದೇ ಸಂದರ್ಭ ಸ್ಪಷ್ಟಪಡಿಸಿದರು. ಶಾಸಕ ಅಪ್ಪಚ್ಚು ರಂಜನ್ ಅವರು ಕೆ.ಪಿ. ಚಂದ್ರಕಲಾ ಅವರ ವಿರುದ್ಧ ಗುಮನಕೊಲ್ಲಿಯ ಬಸವೇಶ್ವರ ದೇವಸ್ಥಾನದ ಜಾಗ ಪರಭಾರೆಯ ಆರೋಪಗಳನ್ನು ಮಾಡಿದ್ದಾರೆ. ಈ ವಿಚಾರವನ್ನು ಸಾಬೀತು ಪಡಿಸಲು ಶಾಸಕರಿಗೆ ನೀಡಿರುವ ಬಹಿರಂಗ ಸವಾಲನ್ನು ಅವರು ಸ್ವೀಕರಿಸಿಲ್ಲವೆಂದು ಟೀಕಿಸಿದ ಶಶಿಧರ್ ಸವಾಲು ಸ್ವೀಕರಿಸಲಿ ಎಂದು ಒತ್ತಾಯಿಸಿದರು.
::: ಅರಳು ಮರಳು :::
ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಕಾವೇರಿ ನದಿಯ ಹೂಳೆತ್ತುವ ಕಾಮಗಾರಿಯ ಕುರಿತು ನಾನು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಶಾಸಕರು ತನ್ನನ್ನು ‘ಅರಳು ಮರಳು’ ಎಂದು ಲೇವಡಿ ಮಾಡಿದ್ದಾರೆ. ಆದರೆ, ಅರಳುಮರಳಾಗಿರುವುದು ನನಗಲ್ಲ, ಮಂತ್ರಿಯಾಗಿಲ್ಲ ಎನ್ನುವ ಕಾರಣದಿಂದ ಅಪ್ಪಚ್ಚು ರಂಜನ್ ಅವರಿಗೆ ಎಂದು ಆರೋಪಿಸಿದರು.
ಹೂಳೆತ್ತುವ ಕಾಮಗಾರಿಯಿಂದ ಸಾಕಷ್ಟು ಹಣ ಪೋಲಾಗಿದ್ದು, ಈ ಯೋಜನೆ ಮತ್ತೆ ಅನುಷ್ಟಾನಕ್ಕೆ ತರಬಾರದೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಘಟಕದ ಪ್ರಮುಖ ರಜಾಕ್, ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕದ ಜಿಲ್ಲಾ ಸಂಚಾಲಕ ತೆನ್ನೀರಾ ಮೈನ ಉಪಸ್ಥಿತರಿದ್ದರು.