ನೈಜ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ಕೊಡಗು ಮುಸ್ಲಿಂ ಸಮಾಜ ಒತ್ತಾಯ

ಮಡಿಕೇರಿ ಆ.18 : ಬೆಂಗಳೂರಿನ ಡಿಜೆ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ಬಂಧನವನ್ನು ನಿಲ್ಲಿಸಿ, ನೈಜ ಆರೋಪಿಗಳನ್ನು ಬಂಧನಕ್ಕೊಳಪಡಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಮುಸ್ಲಿಂ ಸಮಾಜ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಕೆ.ಎಂ.ಇಬ್ರಾಹಿಂ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆ ಪೂರ್ವ ನಿಯೋಜಿತವಲ್ಲವೆಂದು ಅಭಿಪ್ರಾಯಪಟ್ಟರು. ಪ್ರತಿಭಟನೆಯ ಹಂತದಲ್ಲಿ ಕೆಲವು ಕಿಡಿಗೇಡಿಗಳಿಂದ ನಡೆದ ದುಷ್ಕøತ್ಯ ಇದಾಗಿದ್ದು, ಇದನ್ನು ಮುಸ್ಲಿಂ ಸಮಾಜ ಖಂಡಿಸುತ್ತದೆ ಎಂದರು.
ಗಲಭೆ ಪ್ರಕರಣದಲ್ಲಿ ಭಾಗಿಗಳಾದ ಆರೋಪಿಗಳನ್ನು ಗುರುತಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಪ್ರಶ್ನೆಯೊಂದಕೆ ಉತ್ತರಿಸಿದ ಕೆ.ಎಂ. ಇಬ್ರಾಹಿಂ, ಆದರೆ ಇದು ಕೇವಲ ಒಂದು ವರ್ಗಕ್ಕೆ ಸೀಮಿತವಾಗದಿರಲಿ. ದುಷ್ಕ್ಯತ್ಯವೆಸಗಿದ ಎಲ್ಲಾ ಸಮೂಹದವರಿಗೂ ಅನ್ವಯವಾಗಬೇಕೆಂದರು.
ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಅವರ ಸೋದರಳಿಯ ನವೀನ್ ಎಂಬಾತ ಪ್ರವಾದಿಗಳ ಬಗ್ಗೆ ಅವಹೇಳನಕಾರಿ ಪೋಸ್ಟನ್ನು ಹಾಕಿ ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಆರೋಪಿ ನವೀನ್ ಈ ಮೊದಲೇ ಇಂತಹದ್ದೇ ಹಲವು ಪೋಸ್ಟ್‍ಗಳನ್ನು ತನ್ನ ಖಾತೆಯ ಮೂಲಕ ಹರಡಿ ಕೋಮು ದ್ವೇಷವನ್ನು ಹರಡಲು ಪ್ರಯತ್ನಿಸಿದ್ದ ಎಂದು ಆರೋಪಿಸಿದರು.
ಆರೋಪಿ ನವೀನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರೂ ಸ್ಪಂದಿಸದ ಪೊಲೀಸರ ವಿಳಂಬ ನೀತಿಯೇ ಬೆಂಗಳೂರಿನ ಗಲಭೆಗೆ ಕಾರಣವೆಂದು ಅಭಿಪ್ರಾಯಪಟ್ಟ ಇಬ್ರಾಹಿಂ, ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಾದ ಕ್ರಮವಲ್ಲ ಎಂದರು.
ಘಟನೆಗೆ ಸಂಬಂಧಿಸಿದಂತೆ 400ಕ್ಕಿಂತಲೂ ಹೆಚ್ಚಿನ ಅಮಾಯಕರನ್ನು ಬಂಧಿಸಿದ್ದು, ಪೊಲೀಸ್ ಇಲಾಖೆ ಇಂತಹ ಸಾಮೂಹಿಕ ಬಂಧನವನ್ನು ತಕ್ಷಣ ಕೊನೆಗೊಳಿಸಬೇಕು. ಸೂಕ್ತ ಆಧಾರಗಳ ಮೂಲಕ ನೈಜ ಆರೋಪಿಗಳನ್ನು ಬಂಧಿಸಬೇಕು ಮತ್ತು ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ ಅವರು, ಈ ರೀತಿಯ ಸಾಮೂಹಿಕ ಬಂಧನದ ಅಭಿಯಾನ ಮುಂದುವರಿದಲ್ಲಿ ಮುಸ್ಲಿಂ ಸಮುದಾಯವು ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಸಮಾಜದ ಕಾರ್ಯಾಧ್ಯಕ್ಷ ಪಿ.ಎಂ.ಖಾಸಿಂ ಮಾತನಾಡಿ, ಬೆಂಗಳೂರಿನಲ್ಲಿ ನಡೆದಿರುವ ರಾಕ್ಷಸೀ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಗಲಭೆÉಗೆ ಸರಕಾರ ಮತ್ತು ಪೊಲೀಸ್ ವೈಫಲ್ಯವೇ ಕಾರಣ, ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಪೂರಿತ ಪೋಸ್ಟ್ ಮಾಡಿದ ನವೀನ್ ವಿರುದ್ಧ ದೂರು ನೀಡಿದ ತಕ್ಷಣ ಕ್ರಮ ಕೈಗೊಳ್ಳದೆ ಇದ್ದುದೆ ಇದಕ್ಕೆ ಕಾರಣವೆಂದು ಆರೋಪಿಸಿದರು.
ಮುಸ್ಲಿಂ ಸಮಾಜದ ಉಪಾಧ್ಯಕ್ಷÀ ಎಂ.ಹೆಚ್.ಅಬ್ದುಲ್ ರೆಹಮಾನ್, ವಕ್ಫ್ ಮಂಡಳಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್(ಬಾಪು), ಕುಶಾಲನಗರ ತಾಲ್ಲೂಕು ಮುಸ್ಲಿಂ ಒಕ್ಕೂಟದ ಕಾರ್ಯದರ್ಶಿ ಝಕ್ರಿಯ ಹಾಗೂ ಮಡಿಕೇರಿ ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ಎಂ.ಎ.ನಝೀರ್ ಉಪಸ್ಥಿತರಿದ್ದರು.