ಭಾಗಮಂಡಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ : ಪರಿಶೀಲನೆ

19/08/2020

ಮಡಿಕೇರಿ ಆ.19 : ಭಾಗಮಂಡಲ ಹೋಬಳಿಯ ನೆರೆಪೀಡಿತ ಪ್ರದೇಶಗಳಾದ ಭಾಗಮಂಡಲ, ತಣ್ಣಿಮಾನಿ ಹಾಗೂ ಚೇರಂಗಾಲ ಗ್ರಾಮಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೇರಂಗಾಲ ಗ್ರಾಮದ ಕೂಡಕಂಡಿ ಮನೆಗಳಿಗೆ ತೆರಳುವ ರಸ್ತೆಯಲ್ಲಿನ ಕಾಲು ಸೇತುವೆ ಮುರಿದು ಹೋಗಿದೆ. ಪರಿವಾರ ಹಾಗೂ ಮತ್ತಾರಿ ಮನೆಗಳಿಗೆ ತೆರಳುವ ರಸ್ತೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿರುವ ಮುಳುಗು ಸೇತುವೆ ಹಾನಿಗೀಡಾಗಿರುವ ಕಾರಣ ತಾತ್ಕಾಲಿಕವಾಗಿ ನಿರ್ಮಿಸಿರುವ ಕಾಲು ಸೇತುವೆ ವೀಕ್ಷಿಸಿದರು.
ಬಳಿಕ ಮಾತನಾಡಿದ ಶಾಸಕರು ಹಾನಿಗೀಡಾದ ಸೇತುವೆ ಹಾಗೂ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ನಾಳೆಯೇ ಎಂಜಿನಿಯರ್‍ಗಳು ಭೇಟಿ ನೀಡಿ ಕ್ರಿಯಾಯೋಜನೆ ತಯಾರಿಸಿ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಲಿದ್ದಾರೆ ಎಂದರು.
ಚೇರಂಗಾಲ ಹಾಗೂ ತಣ್ಣಿಮಾನಿ ಭಾಗಗಳಲ್ಲಿ ಪ್ರವಾಹದಿಂದಾಗಿ ಹಾಗೂ ಗುಡ್ಡ ಕುಸಿತದಿಂದಾಗಿ ನಾಟಿ ಮಾಡಿದ ಗದ್ದೆಗಳು ಕೆಸರು ಮಣ್ಣು ಮತ್ತು ಮರಳಿನಿಂದ ತುಂಬಿ ಕೃಷಿಕರಿಗೆ ನಷ್ಟವುಂಟಾಗಿದೆ. ಚೇರಂಗಾಲ ವ್ಯಾಪ್ತಿಯಲ್ಲಿ ಸಾಕಷ್ಟು ಭತ್ತದ ಗದ್ದೆಗಳು ಹಾಗೂ ತೋಟಗಳು ಹಾನಿಗೊಳಗಾಗಿದ್ದು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಯಾವುದೇ ನಿಬಂಧನೆ ಇಲ್ಲದೆ ಕೂಡಲೇ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುವುದು. ತಣ್ಣಿಮಾನಿ ಗ್ರಾಮದ ಕುದುಪಜೆ ಐನ್ ಮನೆಗೆ ತೆರಳುವ ರಸ್ತೆಯಲ್ಲಿನ ಸೇತುವೆ ಹಾನಿಗೊಳಗಾಗಿದ್ದು ಅದನ್ನು ಕೂಡಲೇ ದುರಸ್ತಿ ಮಾಡಲಾಗುವುದು ಎಂದರು.
ಚೇರಂಗಾಲದ ಬೆನ್ನೂರು ಕಾಡಿನಲ್ಲಿ ಸುಮಾರು 50 ಏಕರೆಯಷ್ಟು ಪ್ರದೇಶ ಗುಡ್ಡ ಕುಸಿದು ಹಾನಿಗೊಳಗಾಗಿದೆ. ಇಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕಾಲೋನಿ, ಕೋಳಿಕಾಡು ಸ್ಥಳಗಳಿಗೆ ಸಾಕಷ್ಟು ಹಾನಿಯಾಗಿದೆ. ಚೇರಂಗಾಲ ವಾಪ್ತಿಯಲ್ಲಿನ ನಾಲ್ಕೈದು ಮನೆಗಳು ಮಳೆಗಾಳಿಯಿಂದಾಗಿ ಕುಸಿದು ಬಿದ್ದು ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ಅವರಿಗೆ ಬದಲಿ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.
ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೊಸಮನೆ ಕವಿತಾ ಪ್ರಭಾಕರ್, ತಹಶೀಲ್ದಾರ್ ಮಹೇಶ್, ಗ್ರಾಮ ಲೆಕ್ಕಿಗರಾದ ಶರ್ಮಿಳಾ, ಪ್ರಮುಖರಾದ ಪಿ.ಎಂ.ರಾಜೀವ್ ಇದ್ದರು.