ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

August 19, 2020

ಮಡಿಕೇರಿ ಆ.19 : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಇಚ್ಛಿಸುವವರು ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಪಡೆಯುವುದು. ಅರ್ಜಿಗಳನ್ನು ಆಗಸ್ಟ್, 31 ರೊಳಗೆ ಪಡೆಯಬೇಕು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್, 16 ರೊಳಗೆ ಸಲ್ಲಿಸಬೇಕು.
ಅರ್ಹತೆ: ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವವರು ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ಸೇರಿರಬೇಕು. ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲು ಅರ್ಜಿದಾರರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಹಾಗೂ ಒಂದೇ ಕಡೆ ಹೊಂದಿಕೊಂಡಿರುವಂತೆ ಕನಿಷ್ಠ 1 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು. 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು.
ರಾಜ್ಯ ಸರ್ಕಾರದ ಯೋಜನೆಗಳ ವಿವರ: ಪಂಚವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ, ಅರಿವು-ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ, ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಸಾಲ ಯೋಜನೆ, ಕಮ್ಮಾರಿಕೆ, ಅಕ್ಕಸಾಲಿಗ ಮತ್ತು ಬಡಗಿ ಉದ್ಯಮಿಗಳಿಗೆ ತರಬೇತಿ ಮತ್ತು ಸಾಲ ಯೋಜನೆ. ಈ ಯೋಜನೆಗಳಿಗೆ ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ.40 ಸಾವಿರಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.55 ಸಾವಿರಗಳಿಗಿಂತ ಕಡಿಮೆ ಇರಬೇಕು. (ಅರಿವು ಯೋಜನೆಗೆ ವಾರ್ಷಿಕ ವರಮಾನವು ರೂ.3.50ಲಕ್ಷಗಳ ಮಿತಿ ಇರಬೇಕು).
ಈ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವವರು ನಿಗಮದ ವೆಬ್‍ಸೈಟ್ www.karnataka.gov.in/kvcdcl ರಲ್ಲಿ ಪಡೆಯಬಹುದು ಹಾಗೂ ನಿಗಮದ ದೂ.ಸಂ. 08272-221656 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.