ಅಧಿಕಾರಿಗಳಿಗೆ ಜನಸೇವಕರೆಂಬ ಧ್ಯೇಯ ಮುಖ್ಯ: ಬಿ.ಸಿ. ದಿನೇಶ್ ಅಭಿಪ್ರಾಯ : ಸಿಪಿಐ ದಿವಾಕರರಿಗೆ ಸನ್ಮಾನ

19/08/2020


ಮಡಿಕೇರಿ,  ಅ.19: ಕೆಲವು ಅಧಿಕಾರಿಗಳಲ್ಲಿ ತಾವು ಜನರ ಯಜಮಾನರೆಂಬ ತಪ್ಪು ಕಲ್ಪನೆಯಿರುತ್ತದೆ. ಇದು ಸರಿಯಲ್ಲ. ಅಧಿಕಾರಿಗಳು ಜನಸೇವಕರೆಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸಿದರೆ ವೃತ್ತಿ ಜೀವನದಲ್ಲಿ ಯಶಸ್ಸು ಖಂಡಿತ ಸಾಧ್ಯ ಎಂದು ಕೊಡಗಿನ ಹಿರಿಯ ಪತ್ರಕರ್ತರಾದ ಬಿ.ಸಿ. ದಿನೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ‘ಗೆಳೆಯರ ಆತ್ಮೀಯ ಬಳಗ’ದ ವತಿಯಿಂದ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿಗಳ ಪ್ರತಿಷ್ಠಿತ ಪೊಲೀಸ್ ಪದಕಕ್ಕೆ ಭಾಜನರಾದ ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ (ಸಿಪಿಐ) ಸಿ.ಎನ್. ದಿವಾಕರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು,  ಜನಸೇವಕರಾಗಿ ಸಮಾಜದಲ್ಲಿ ಕರ್ತವ್ಯ ನಿರ್ವಹಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ.ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದದ್ದು. ಆದರೆ ಇದಕ್ಕೆಲ್ಲಾ ಅಪವಾದವೆಂಬಂತೆ ಜನಸೇವೆ ಮಾಡುವ ಪ್ರಾಮಾಣಿಕ ಅಧಿಕಾರಿಗಳು ಕೂಡ ಸಮಾಜದಲ್ಲಿ ಇಲ್ಲದಿಲ್ಲ.  ರಾಷ್ಟ್ರಪತಿಗಳ ಪೋಲೀಸ್ ಪದಕ ವಿಜೇತ ದಿವಾಕರ್ ಅವರು ಜನಸೇವಕರ ಸಾಲಿಗೆ ಸೇರಿದವರಾಗಿದ್ದು, ಸಮಾಜದ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ ಅವರಲ್ಲಿರುವ ವಿಶೇಷ ಗುಣ ಅಭಿನಂದನಾರ್ಹ. ಅವರ ಜನಪರ ನಿಲುವಿನ ಕಾರ್ಯಕ್ಷಮತೆಯ ಹಿನ್ನೆಲೆಯಲ್ಲಿ ಅವರಿಗೆ ಸಂದ ರಾಷ್ಟ್ರಪತಿಗಳ ಗೌರವ ಅತ್ಯಂತ ಸೂಕ್ತವಾದದ್ದು ಎಂದು ಮೆಚ್ಚುಗೆಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ,  ಸರ್ಕಾರಿ ವ್ಯವಸ್ಥೆಯಲ್ಲಿ ಅದೆಷ್ಟೋ ಅಧಿಕಾರಿಗಳು ಸೀಮಿತ ಅವಧಿಯಲ್ಲಿ ಕಾರ್ಯನಿರ್ವಹಿಸಿ ಮತ್ತೆ ವರ್ಗಾವಣೆಯಾಗಿ ಬೇರೆಡೆಗೆ ತೆರಳುತ್ತಾರೆ. ಈ ಅವಧಿಯಲ್ಲಿ ಎಲ್ಲಾ ಅಧಿಕಾರಿಗಳು ಜನರ ಹೃದಯ ಗೆಲ್ಲಲು ಸಾಧ್ಯವಿಲ್ಲ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಜನ ಮೆಚ್ಚುಗೆ ಗಳಿಸುವುದು ತೀರಾ ದೂರದ ಮಾತು. ಆದರೆ ದಿವಾಕರ್ ಅವರು ಇದುವರೆಗೆ ಕರ್ತವ್ಯ ನಿರ್ವಹಿಸಿದ ಸ್ಥಳಗಳಲ್ಲಿ ಅವರ ಕಾರ್ಯವೈಖರಿಯೇ ಅವರನ್ನು ಜನಾನುರಾಗಿ ಮಾಡಿದೆ. ಇದಕ್ಕೆ ಅವರಲ್ಲಿರುವ ಜನಸ್ನೇಹಿ ಧೋರಣೆ ಮತ್ತು ಸಮಾಜದ ಕೆಳವರ್ಗದವರ ಬಗ್ಗೆ ಅವರಿಗಿರುವ ಕಾಳಜಿಯೇ  ಕಾರಣ ಎಂದು ಶ್ಲಾಘಿಸಿದರು.
ತಮ್ಮ ಸರಳತೆ, ಯಾರನ್ನೂ ಮನ ನೋಯಿಸದ ಮಾತು ಮತ್ತು ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಅವರು ನಡೆಸುವ ಮನವೊಲಿಕೆ ಕ್ರಮ ನಿಜಕ್ಕೂ ಅಭಿನಂದನಾರ್ಹ. ಪೊಲೀಸ್  ಠಾಣೆಗೆ ಬರುವ ಪ್ರತಿಯೊಬ್ಬರನ್ನು ಗೌರವದಿಂದ ಸಮಾನವಾಗಿ ಮಾತನಾಡಿಸುವ ಗುಣ ಹೊಂದಿರುವ ದಿವಾಕರ್ ಅವರು, ನಿಜರೂಪದಲ್ಲಿ ಜನಸೇವಕ ಅಧಿಕಾರಿಯಾಗಿ ಸದಾ ಗುರುತಿಸಲ್ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸೇವೆ ಮಾದರಿಯಾದದ್ದು ಎಂದರಲ್ಲದೆ, ಇವರ ವೃತ್ತಿ ಬದ್ಧತೆ ಮತ್ತು ಕರ್ತವ್ಯನಿಷ್ಠೆಯ ಹಿನ್ನೆಲೆಯಲ್ಲಿ ಇವರನ್ನು ರಾಷ್ಟ್ರಪತಿಗಳ ಪದಕಕ್ಕೆ ಶಿಫಾರಸು ಮಾಡಿದ ಕೊಡಗು ಜಿಲ್ಲೆಯ ಹಿಂದಿನ ಎಸ್ಪಿ ಡಾ.ಸುಮನ್ ಡಿ.ಪಿ. ಅವರು ಕೂಡ ಅಭಿನಂದನಾರ್ಹರು ಎಂದು ಇದೇ ಸಂದರ್ಭದಲ್ಲಿ ಟಾಟು ಮೊಣ್ಣಪ್ಪ ಹೇಳಿದರು. 
‘ಗ್ರೀನ್ ಸಿಟಿ ಫೋರಮ್ ಕೊಡಗು’ ಸಂಸ್ಥೆಯ ಸ್ಥಾಪಕರಾದ ಚೈಯಂಡ ಸತ್ಯ ಗಣಪತಿ ಮಾತನಾಡಿ,  ಪೊಲೀಸ್ ಇಲಾಖೆಯೆಂದರೆ ಜನತೆ ಭಯ ಮತ್ತು ಅನುಮಾನದಿಂದ ನೋಡುವ ಈ ಕಾಲದಲ್ಲಿ ಕೆಲವು ನಿಷ್ಠಾವಂತ ಅಧಿಕಾರಿಗಳು ತಮ್ಮ ವೃತ್ತಿ ಶೈಲಿಯಿಂದ ಪೊಲೀಸ್ ಇಲಾಖೆಯ ಕುರಿತು ಜನಸಾಮಾನ್ಯರಿಗಿರುವ ತಪ್ಪು ಕಲ್ಪನೆಗಳನ್ನು ಬದಲಿಸಿಬಿಡುತ್ತಾರೆ. ತಮ್ಮ ಸೇವಾವಧಿಯಲ್ಲಿ ಯಾರು ಜನಪರ ಮತ್ತು ನ್ಯಾಯಪರವಾಗಿ ನಡೆದುಕೊಳ್ಳುತ್ತಾರೋ ಅಂತವರು ಅವರ ನಿವೃತ್ತಿಯ ನಂತರವೂ ಜನಸ್ಮರಣೆಯಲ್ಲಿರುತ್ತಾರೆ. ಈ ಸಾಲಿನಲ್ಲಿ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿರುವ ಸಿ.ಎನ್. ದಿವಾಕರ್ ಅವರು ಕೂಡ ಸೇರುತ್ತಾರೆ ಎಂದು ಹರುಷ ವ್ಯಕ್ತಪಡಿಸಿದರು. 
‘ಹಾಕಿ ಕೊಡಗು’ ಸಂಸ್ಥೆಯ ಪದಾಧಿಕಾರಿಯಾಗಿರುವ  ಕುಪ್ಪಂಡ  ದಿಲನ್ ಬೋಪಣ್ಣ ಮಾತನಾಡಿ, ಜನಸೇವೆಗೆ ಪೊಲೀಸ್ ಇಲಾಖೆ ಅತ್ಯಂತ ಸೂಕ್ತ ಸರಕಾರಿ ಯಂತ್ರವಾಗಿದೆ. ಆದರೆ ಕೆಲವೊಂದು ಅಧಿಕಾರಿಗಳು ತಮ್ಮ ಅಧಿಕಾರ ದರ್ಪದಿಂದ ಜನಸಾಮಾನ್ಯರಿಗೆ  ನೀಡಬೇಕಾದ ಕನಿಷ್ಠ ಗೌರವವನ್ನು ನೀಡುವುದಿಲ್ಲ. ಆದರೆ ದಿವಾಕರ್ ಅವರು ಇದರಿಂದ ಹೊರತಾಗಿದ್ದಾರೆ. ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ  ರಾಜ್ಯದಲ್ಲಿ ಈ ಬಾರಿ ರಾಷ್ಟ್ರಪತಿಗಳ ಪದಕ ಪಡೆದ ಕೇವಲ19 ಪೊಲೀಸ್ ಅಧಿಕಾರಿಗಳ ಪೈಕಿ ದಿವಾಕರ್ ಅವರು ಸ್ಥಾನ ಗಿಟ್ಟಿಸಿಕೊಂಡಿರುವುದು ಸಾಮಾನ್ಯ ವಿಷಯವಲ್ಲ. ಅವರ ಕರ್ತವ್ಯ ನಿಷ್ಠೆ ಮತ್ತು ಇಲಾಖೆಯಲ್ಲಿ ಸುದೀರ್ಘ ವರ್ಷಗಳ ಕಾಲ ಸಲ್ಲಿಸಿದ ಅವರ ಸೇವೆ ನಿಜಕ್ಕೂ ಶ್ಲಾಘನೀಯ. ಆದ್ದರಿಂದ ಯೋಗ್ಯ ಪ್ರಶಸ್ತಿಯೊಂದು ಯೋಗ್ಯರೊಬ್ಬರಿಗೆ ದೊರೆತಿದ್ದು ಹೆಚ್ಚು ಸಂತೋಷಕರ ವಿಷಯ ಎಂದು ಶ್ಲಾಘಿಸಿದರು. 
ಕಾಫಿ ಬೆಳೆಗಾರರಾದ ಅಪ್ಪಂಡೇರಂಡ ದಿನು ದೇವಯ್ಯ ಅವರು ಮಾತನಾಡಿ, ಪೊಲೀಸರು  ಕ್ಷುಲ್ಲಕ ವಿಷಯಗಳಿಗೆ ಜನಸಾಮಾನ್ಯರನ್ನು ಅಗೌರವದಿಂದ ಕಾಣುವ ಇಂದಿನ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹೇಗೆ ಸಮಾಜಮುಖಿಗಳಾಗಬೇಕು ಎಂಬುದಕ್ಕೆ ಪೊಲೀಸ್ ವೃತ್ತ ನಿರೀಕ್ಷಕರಾಗಿರುವ ದಿವಾಕರ್ ಅವರು ಸ್ಪಷ್ಟ ಉದಾಹರಣೆಯಾಗಿದ್ದಾರೆ. ಇವರಂತಹ ಅಧಿಕಾರಿಗಳಿಂದ ಇಲಾಖೆಯ ಘನತೆ ಮತ್ತು ಗೌರವ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರಲ್ಲದೆ, ತಮ್ಮ ಸುದೀರ್ಘ ವರ್ಷದ ಸೇವಾವಧಿಯಲ್ಲಿ ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಅವರು ತೋರಿದ ಸಾಧನೆಯೂ ಪದಕದ ಹಿಂದಿದೆ ಎಂದು ಹೇಳಿದರು.
ಮಡಿಕೇರಿಯ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಮಡಿಕೇರಿ ನಗರಸಭೆಯ ಮಾಜಿ ಸದಸ್ಯೆ ಕೆ. ವೀಣಾಕ್ಷಿ, ಪತ್ರಕರ್ತ ರಫೀಕ್ ತೂಚಮಕೇರಿ ಮೊದಲಾದವರು ಪಾಲ್ಗೊಂಡಿದ್ದರು.