ಗೌರಿ-ಗಣೇಶ ಹಬ್ಬ ಆಚರಣೆ : ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪಾಲಿಸಲು ಮನವಿ

August 20, 2020

ಮಡಿಕೇರಿ ಆ.20 : ಗೌರಿ-ಗಣೇಶ ಹಬ್ಬ ಆಚರಿಸುವ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು, ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪಾಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರಾ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶೋತ್ಸವ ಆಚರಿಸುವ ಸಂಬಂಧ ವಿವಿಧ ಸಂಘ ಸಂಸ್ಥೆಗಳು ಹಾಗೂ ಪದಾಧಿಕಾರಿಗಳ ಜೊತೆಗೆ ಇತ್ತೀಚೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಸೋಂಕು ಎಲ್ಲೆಡೆ ಇರುವುದರಿಂದ ಈ ಬಾರಿ ಮುನ್ನೆಚ್ಚರಿಕೆ ವಹಿಸಿ ಗಣೇಶೋತ್ಸವ ಆಚರಿಸಬೇಕಿದ್ದು, ಆ ನಿಟ್ಟಿನಲ್ಲಿ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯನ್ನು ಪಾಲಿಸಬೇಕಿದೆ ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಗಣೇಶೋತ್ಸವ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಮತ್ತಿತರವನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಅವರು ಸಲಹೆ ಮಾಡಿದರು.
ಸಭೆಯಲ್ಲಿ ಡಿವೈಎಸ್‍ಪಿಗಳಾದ ದಿನೇಶ್ ಕುಮಾರ್, ಜಯಕುಮಾರ್, ಶೈಲೇಂದ್ರ, ನಗರಸಭೆ ಪೌರಾಯುಕ್ತರಾದ ಶ್ರೀನಿವಾಸ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಹಲವು ಮಾಹಿತಿ ನೀಡಿದರು.
ಮಾರ್ಗಸೂಚಿ ಇಂತಿದೆ: ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕವಾಗಿ ದೇವಸ್ಥಾನದೊಳಗೆ, ತಮ್ಮ ಮನೆಗಳಲ್ಲಿ ಅಥವಾ ಸರ್ಕಾರಿ/ ಖಾಸಗಿ/ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬಹುದು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸುವುದು. ಪಾರಂಪರಿಕ ಗಣೇಶೋತ್ಸವಕ್ಕಾಗಿ, ಗಣೇಶೋತ್ಸವ ಸಮಿತಿಗಳು, ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್ ಕಾರ್ಪೊರೇಷನ್/ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು. ಒಂದು ವಾರ್ಡಿಗೆ/ ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವನ್ನು ಆಚರಿಸಲು ಪ್ರೋತ್ಸಾಹಿಸುವುದು. ಇಂತಹ ಸ್ಥಳಗಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸುವುದು, ಒಮ್ಮೆಲೆ 20 ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾಧಿಗಳಿಗೆ ಅನುವು ಮಾಡುವುದು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕøತಿಕ, ಸಂಗೀತ, ನೃತ್ಯ ಇನ್ನಿತರ ಯಾವುದೇ ಮನರಂಜನಾ ಕಾರ್ಯಕ್ರಮ ಆಯೋಜಿಸಲು ಅವಕಾಶವಿಲ್ಲ. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆ ಹೊರಡಿಸಬಾರದು, ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.
ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹ ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಮತ್ತು ಸರ್ಕಾರಿ ಹಾಗೂ ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಟ್ಯಾಂಕ್‍ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‍ಗಳಲ್ಲಿ ವಿಸರ್ಜಿಸುವುದು.
ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದು. ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭಕ್ತಾಧಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮುಖಗವುಸು ಧರಿಸಬೇಕು. ಕೋವಿಡ್- 19 ಸಾಂಕ್ರಾಮಿಕ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನ ಹಾಗೂ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು.
ಅಲ್ಲದೇ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು.
ಗಣೇಶೋತ್ಸವ ಆಚರಣೆ ಕಾಲಕ್ಕೆ ಸಂದರ್ಭಕ್ಕನುಗುಣವಾಗಿ ಸರ್ಕಾರ, ಜಿಲ್ಲಾಡಳಿತ, ಪೊಲೀಸ್, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ ಪ್ರಾಧಿಕಾರಗಳಿಂದ ಹೊರಡಿಸಲಾಗುವ ಎಲ್ಲಾ ಆದೇಶ ನಿರ್ದೇಶನ ಹಾಗೂ ಸೂಚನೆಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು.
ಹಬ್ಬಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಿಂದಲೇ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡುವುದು.
ರಾಪ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿ ಶಿಸ್ತಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.

error: Content is protected !!