ಕೊಟ್ಟಿಗೆಯಲ್ಲಿದ್ದ ಗರ್ಭಿಣಿ ಹಸುವನ್ನೇ ಕದ್ದೊಯ್ದರು : ಚೆಟ್ಟಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

20/08/2020

ಚೆಟ್ಟಳ್ಳಿ ಆ.20 : ಚೆಟ್ಟಳ್ಳಿ ಸಮೀಪ ಬಕ್ಕ ಶ್ರೀಮಂಗಲ ಗ್ರಾಮದ ಪರ್ಲಕೋಟಿ ನಾಗರಾಜು ಎಂಬವರ ಎರಡು ವರ್ಷ ಪ್ರಾಯದ ಏಳು ತಿಂಗಳ ಗರ್ಭಿಣಿ ಹಸುವೊಂದನ್ನು ಕೊಟ್ಟಿಗೆಯಿಂದ ಗೋಕಳ್ಳರು ಕದ್ದೊಯ್ದಿರುವ ಪ್ರಕರಣ ದಾಖಲಾಗಿದೆ.
ಮೇಯಲು ಬಿಟ್ಟಿದ್ದ ಹಸುವನ್ನು ಇತರ ದನಕರುಗಳ ಜೊತೆಯಲ್ಲಿ ಹೊಡೆದುಕೊಂಡು ಬಂದು ಕೊಟ್ಟಿಗೆಯಲ್ಲಿ ಕಟ್ಟಿ ಅವುಗಳಿಗೆ ಮೇವನ್ನು ಹಾಕಿ ಕೊಟ್ಟಿಗೆಯ ಗೇಟನ್ನು ಹಾಕಿಕೊಂಡು ಬಂದಿದ್ದರು. ಆದರೆ ಬೆಳಗ್ಗೆ ನೋಡುವಾಗ ಕೊಟ್ಟಿಗೆಯ ಗೇಟನ್ನು ತೆರೆದ ಕಳ್ಳರು ವಯಸ್ಸಾದ ಬೇರೆ ದನಕರುಗಳನ್ನು ಬಿಟ್ಟು ಎರಡು ವರ್ಷ ಪ್ರಾಯದ ಕಪ್ಪು ಬಿಳುಪು ವರ್ಣದ ಹದಿನೈದು ಸಾವಿರ ಬೆಲೆ ಬಾಳುವ ಗರ್ಭಿಣಿ ಹಸುವನ್ನೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ನಾಗರಾಜು ಅವರು ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ದೂರು ನೀಡಿದ್ದಾರೆ.