ಶ್ರೀಮಂಗಲ ಕಾಯಿಮಾನಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ತೆಂಗು, ಕಾಫಿ ಗಿಡಗಳು ನಾಶ

20/08/2020

ಮಡಿಕೇರಿ : ಕಾಡಾನೆ ದಾಳಿಯಿಂದ ಕಾಫಿ ಗಿಡಗಳು ಹಾಗೂ ತೆಂಗಿನ ಮರಗಳು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಶ್ರೀಮಂಗಲ ಸಮೀಪದ ಕಾಯಿಮಾನಿ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ಸಣ್ಣ ಬೆಳೆಗಾರ ಬೊಜ್ಜಂಗಡ ಸುಬ್ರಹ್ಮಣಿ ಅವರ ತೋಟಕ್ಕೆ ದಾಳಿ ಮಾಡಿದ ಕಾಡಾನೆಗಳ ಸಾಕಷ್ಟು ಹಾನಿ ಮಾಡಿದೆ. ಮಳೆಯಿಂದ ತೋಟ ಕೆಸರುಮಯವಾಗಿರುವುದರಿಂದ ಆನೆಗಳು ಹೆಜ್ಜೆ ಇಟ್ಟಲ್ಲೆಲ್ಲ ಹೊಂಡ ಗುಂಡಿಗಳಾಗಿದ್ದು, ಮತ್ತೆ ತೋಟದ ಅಭಿವೃದ್ಧಿ ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಕಾಫಿ ಮತ್ತು ತೆಂಗು ಗಿಡಗಳಿಗೆ ಹಾನಿಯಾಗಿರುವುದರಿಂದ 50 ಸಾವಿರ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಸುಬ್ರಹ್ಮಣಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲೇ ಬೀಡು ಬಿಟ್ಟಿರುವ ಆನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸಂಚರಿಸುತ್ತಿದ್ದು, ಕಷ್ಟ, ನಷ್ಟಗಳೊಂದಿಗೆ ಜೀವಭಯ ಮೂಡಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.