ಕೋಳಿ ಅಂಕ ಜೂಜಾಟ : ಊರುಬೈಲು ಗ್ರಾಮದಲ್ಲಿ 10 ಮಂದಿಯ ಬಂಧನ

20/08/2020

ಮಡಿಕೇರಿ ಆ.20 : ಅಕ್ರಮವಾಗಿ ಕೋಳಿ ಅಂಕದ ಜೂಜಾಟ ನಡೆಸುತ್ತಿದ್ದ 10 ಮಂದಿಯನ್ನು ಬಂಧಿಸಿರುವ ಜಿಲ್ಲಾ ಅಪರಾಧ ಪತ್ತೆದಳದ ಸಿಬ್ಬಂದಿಗಳು, 35 ಕೋಳಿ ಹಾಗೂ 20,300 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಊರುಬೈಲು ಎಂಬಲ್ಲಿ ದೊಡ್ಡ ಗುಂಪೊಂದು ಕೋಳಿ ಅಂಕ ನಡೆಸುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರು, ಕೋಳಿಗಳನ್ನು ಕಟ್ಟಿ ಜೂಜಾಡುತ್ತಿದ್ದ 10 ಜನರನ್ನು ವಶಕ್ಕೆ ಪಡೆದಿದ್ದಾರೆ. ಹಲವು ಮಂದಿ ಕೋಳಿಗಳೊಂದಿಗೆ ಪರಾರಿಯಾಗಿದ್ದಾರೆ.
ಕೋಳಿ ಅಂಕಕ್ಕೆ ಬಳಸಿದ ಅಂದಾಜು 15,000 ರೂ. ಬೆಲೆ ಬಾಳುವ 35 ಕೋಳಿಗಳನ್ನು ಹಾಗೂ 20,300ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಜೂಜಾಡುತ್ತಿದ್ದ ವ್ಯಕ್ತಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಚಿಸಿದ್ದು, ಅದರಂತೆ ಜಿಲ್ಲಾ ಡಿ.ಸಿ.ಐ.ಬಿ. ಇನ್ಸ್‍ಪೆಕ್ಟರ್ ಎನ್.ಕುಮಾರ್ ಆರಾಧ್ಯ, ಮಡಿಕೇರಿ ಗ್ರಾಮಾಂತರ ಉಪ ನಿರೀಕ್ಷಕ ಹೆಚ್.ವಿ ಚಂದ್ರಶೇಖರ್ ಡಿ.ಸಿ.ಐ.ಬಿ ಸಿಬ್ಬಂದಿಗಳಾದ ವಿ.ಜಿ ವೆಂಕಟೇಶ್, ಬಿ.ಎಲ್ ಯೊಗೇಶ್ ಕುಮಾರ್, ಕೆ.ಆರ್ ವಸಂತ, ಎಂ.ಎನ್.ನಿರಂಜನ, ಕೆ.ಎಸ್.ಶಶಿಕುಮಾರ್ ಹಾಗೂ ಸಂಪಾಜೆ ಉಪ ಠಾಣೆಯ ಎಎಸ್‍ಐ ಶ್ರೀಧರ್ ದಾಳಿಯಲ್ಲಿ ಭಾಗವಹಿಸಿದ್ದರು.