ಕೋವಿಡ್ ಸೋಂಕು : ಕೊಡಗಿನಲ್ಲಿ ಮೃತರ ಸಂಖ್ಯೆ 16 ಕ್ಕೆ ಏರಿಕೆ

20/08/2020

ಮಡಿಕೇರಿ ಆ.20 : ಕೊಡಗಿನಲ್ಲಿ ಕೋವಿಡ್ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಹೋಬಳಿ, ಗುಮ್ಮನಕೊಲ್ಲಿಯ ಚೌಡೇಶ್ವರಿ ಬಡಾವಣೆಯ 62 ವರ್ಷದ ಮಹಿಳೆಯೊಬ್ಬರು ಈ ಹಿಂದಿನಿಂದಲೂ ಕ್ಯಾನ್ಸರ್ ಮತ್ತು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು.
ಆ.18 ರಂದು ಇವರಿಗೆ ಜ್ವರ ಕಾಣಿಸಿಕೊಂಡಿದ್ದು, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಂಡಿದ್ದರು. ಆಗ ಕೋವಿಡ್ ಪರೀಕ್ಷೆ ಸಂಬಂಧ ಅವರ ಗಂಟಲು/ಮೂಗು ದ್ರವ ಮಾದರಿಯನ್ನು ಸಂಗ್ರಹಿಸಿ, ಜ್ವರಕ್ಕೆ ಮಾತ್ರೆಗಳನ್ನು ನೀಡಿ ಅವರನ್ನು ಮನೆಗೆ ಕಳುಹಿಸಲಾಗಿತ್ತು.
ಆ.19 ರಂದು ಅವರಿಗೆ ತೀವ್ರ ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಇಂದು ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಬೆಳಗ್ಗೆ 11.30 ಗಂಟೆಗೆ ಮೃತಪಟ್ಟಿದ್ದಾರೆ.
ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮದ 65 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಆ.5ರಂದು ಜ್ವರ ಕಾಣಿಸಿಕೊಂಡ ಇವರನ್ನು ಆ.7ರಂದು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದ್ದು, ತಕ್ಷಣ ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಡಯಾಲಿಸಿಸ್ ಮಾಡುವ ಸಂದರ್ಭ ಇವರು ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.