ಕೊಡಗಿನಲ್ಲಿ 34,170 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ : ಜಿಲ್ಲಾಧಿಕಾರಿ ಭೇಟಿ
20/08/2020

ಮಡಿಕೇರಿ ಆ.20 : ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆ ಮತ್ತು ಗಾಳಿಯ ತೀವ್ರತೆಯಿಂದ ಕೃಷಿ, ತೋಟಗಾರಿಕೆ ಮತ್ತು ತೋಟದ ಬೆಳೆಗಳು ಹಾನಿಯಾಗಿದ್ದು, ಜಿಲ್ಲೆಯಲ್ಲಿ ಅಂದಾಜು 34,170 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ಮಾರ್ಗಸೂಚಿಯಂತೆ ಶೇ.33 ಮತ್ತು ಅದಕ್ಕೂ ಮೇಲ್ಪಟ್ಟು ಬೆಳೆಹಾನಿಗೊಳಗಾದ ರೈತರು ಬೆಳೆಹಾನಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ರೈತರು ಪರಿಹಾರ ಕೋರಿ ನಿಗಧಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಹತ್ತಿರದ ನಾಡ ಕಚೇರಿ ಅಥವಾ ಸಂಬಂಧಪಟ್ಟ ಗ್ರಾಮಲೆಕ್ಕಿಗರಿಗೆ ಸಲ್ಲಿಸಬಹುದಾಗಿದೆ.
ಈ ಬಗ್ಗೆ ಕಂದಾಯ, ತೋಟಗಾರಿಕೆ, ಕೃಷಿ ಮತ್ತು ಕಾಫಿ ಮಂಡಳಿಯಿಂದ ಜಂಟಿ ಸರ್ವೆ ಕೈಗೊಳ್ಳಲಾಗಿದ್ದು, ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ ಮತ್ತು ಶ್ರೀಮಂಗಲ ಹೋಬಳಿಗಳಲ್ಲಿ ಬೆಳೆಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿದರು. ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಜರಿದ್ದರು.