ಹಸುವಿನ ಮೇಲೆ ಕಾಡಾನೆ ದಾಳಿ : ಪೊನ್ನಂಪೇಟೆ ಮತ್ತೂರಿನಲ್ಲಿ ಘಟನೆ

20/08/2020

ಪೊನ್ನಂಪೇಟೆ, ಅ.20: ಗದ್ದೆಯ ಸಮೀಪ ಮೇಯುತ್ತಿದ್ದ ಹಸುವೊಂದರ ಮೇಲೆ ಹಾಡಹಗಲೇ ಕಾಡಾನೆಗಳ ಹಿಂಡು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಪೊನ್ನಂಪೇಟೆ ಸಮೀಪದ ಮತ್ತೂರಿನಲ್ಲಿ ಇಂದು ಮಧ್ಯಾಹ್ನ  ನಡೆದಿದೆ.
ಕಾಡಾನೆ ದಾಳಿಯಿಂದ ಗಾಯಗೊಂಡ ಹಸು ಪೊನ್ನಂಪೇಟೆ ಸಮೀಪದ ಮತ್ತೂರಿನಲ್ಲಿರುವ  ಪೊನ್ನಂಪೇಟೆ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷರಾದ ಪಿ.ಎ. ಅಜ್ಹಿಜ್ಹ್ ಅವರಿಗೆ ಸೇರಿದ್ದಾಗಿದ್ದು, ಹಾಡಹಗಲೇ ನಡೆದ ಈ ಕಾಡಾನೆ ದಾಳಿಯಿಂದ ಈ ಭಾಗದ ಜನತೆ ಆತಂಕಗೊಂಡಿದ್ದಾರೆ.
ಹಸುವನ್ನು ಅಜ್ಹಿಜ್ಹ್ ಅವರ   ಮನೆಯ ಸಮೀಪವಿರುವ ಗದ್ದೆಯಲ್ಲಿ ಮೇಯಲು ಬಿಟ್ಟ ಸಂದರ್ಭದಲ್ಲಿ ಮಧ್ಯಾಹ್ನದ ಸಮಯದಲ್ಲಿ ದಿಢೀರನೆ ಎದುರಾದ ಮರಿಯಾನೆ ಸೇರಿದಂತೆ ನಾಲ್ಕು ಕಾಡಾನೆಗಳ ಹಿಂಡು ಹಸುವಿನ ಮೇಲೆ ಏಕಾಏಕಿ‌ ಧಾಳಿ ನಡೆಸಿದೆ. ಈ ವೇಳೆ ಆನೆಯೊಂದು ಹಸುವಿಗೆ ತನ್ನ ಕೊಂಬಿನಿಂದ ತಿವಿದ ಪರಿಣಾಮ ಹಸುವಿನ ಹೊಟ್ಟೆಯ ಭಾಗಕ್ಕೆ ತೀವ್ರ ಗಾಯ ಉಂಟಾಗಿದೆ ಎಂದು ಅಜೀಜ್ ಅವರು ತಿಳಿಸಿದ್ದಾರೆ.
ಹಾಡಹಗಲೇ ಘಟನೆ ಸಂಭವಿಸಿದ್ದರಿಂದ ಗದ್ದೆಯ ಭಾಗದಲ್ಲಿದ್ದ ಕೆಲ ಸ್ಥಳೀಯರು ಜೋರಾಗಿ ಕೂಗು ಹಾಕಿ ಬೆದರಿಸಿದಾಗ ಕಾಡಾನೆಗಳ ಹಿಂಡು ಸ್ಥಳದಿಂದ ತೆರಳಿತು ಎಂದು ಅವರು ತಿಳಿಸಿದ್ದಾರೆ. 
ದಾಳಿಯನ್ನು ಪ್ರತ್ಯಕ್ಷ ನೋಡಿದ ಕೆಲ ಸ್ಥಳೀಯರು ಕೂಗಿದ ಕಾರಣಕ್ಕಾಗಿ ಹಸು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲ ಸಮಯದಿಂದ ಈ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ನಿರಂತರವಾಗಿ ಸಂಚರಿಸುತ್ತಿದೆ. ಈ ಕುರಿತು ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆಗಳು ಕಾಫಿ ತೋಟ ಮತ್ತು ನಾಟಿ ಮಾಡಿದ ಭತ್ತದ ಗದ್ದೆಗೆ ಲಗ್ಗೆಯಿಟ್ಟು ಕೃಷಿಯನ್ನು ಹಾನಿಗೊಳಿಸುತ್ತಿದೆ. ಈ ಕುರಿತಾಗಿ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇನ್ನಾದರೂ ಅರಣ್ಯ ಇಲಾಖೆ ಇಲ್ಲಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ಇದಕ್ಕೆ ಇಲಾಖೆ ಸ್ಪಂದಿಸದಿದ್ದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.