ಮತ್ತೊಬ್ಬ ಪ್ರಮುಖ ಆರೋಪಿ ಬಂಧನ

21/08/2020

ಬೆಂಗಳೂರು ಆ.21 : ಡಿ.ಜೆ. ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಡಿ.ಜೆ ಹಳ್ಳಿ ರೋಷನ್ ನಗರದ ನಿವಾಸಿ ಖಲೀದ್ ಬಂಧಿತ ಆರೋಪಿ. ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಮುಜಮ್ಮಿಲ್, ಆಯಾಜ್, ಆಫ್ನಾನ್ ಜೊತೆಗೂಡಿ ಜನರನ್ನು ಒಗ್ಗೂಡಿಸಿ ಗಲಭೆಗೆ ಮುಂದಾಗಿದ್ದ ಎಂಬ ಮಾಹಿತಿಯ ಮೇರೆಗೆ ಖಲಿದ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ, ನಗರದಲ್ಲಿ ಬಂಧಿತ ಶಂಕಿತ ಉಗ್ರ ಡಾ.ಅಬ್ದುಲ್ ರೆಹಮಾನ್‍ನ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ-ಎನ್‍ಐಎ ಅಧಿಕಾರಿಗಳು ತೀವ್ರ ಗೊಳಿಸಿದ್ದಾರೆ. ಆರೋಪಿ ಹಾಗೂ ಆತನ ಸ್ನೇಹಿತರು ಬಸವನಗುಡಿ ಫ್ಲಾಟ್‍ನಲ್ಲಿ ಅಪ್ಲಿಕೇಶನ್ ಡೆವಲಪ್ ಮಾಡುವ ಹಾಗೂ ಕೋಡಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯಿಂದ ವಶಪಡಿಸಿಕೊಂಡಿರುವ ಮೊಬೈಲ್, ಕೆಮಿಕಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.