ಎಸ್‍ಕೆಎಸ್‍ಎಸ್‍ಎಫ್ – ಜಿಸಿಸಿ ಕೊಡಗು ಸಮಿತಿಯ ಯಿಂದ ನೆರೆ ಸಂತ್ರಸ್ತರಿಗೆ ಕಿಟ್ ವಿತರಣೆ

ಮಡಿಕೇರಿ ಆ. 21 : ಕಳೆದೆರಡು ವರ್ಷಗಳಂತೆ ಈ ವರ್ಷವೂ ಕಾಫಿನಾಡು ಕೊಡಗು ಪ್ರಕೃತಿ ವಿಕೋಪಕ್ಕೆ ತತ್ತರಿಸಿದ್ದು, ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ “ಮನಃ ಬೆಸುಗೆ.. ನೆಮ್ಮದಿಯ ಅಪ್ಪುಗೆ” ಎಂಬ ಘೋಷಣೆಯಡಿ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಎಸ್ ಕೆ ಎಸ್ ಎಸ್ ಎಫ್ – ಜಿಸಿಸಿ ಕೊಡಗು ಸಮಿತಿಯ ವತಿಯಿಂದ ಅರ್ಹ ಸಂತ್ರಸ್ತರಿಗೆ ದಿನೋಪಯೋಗಿ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಣಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸಿದ್ದಾಪುರ ವರಕ್ಕಲ್ ಸ್ಮಾರಕ ಭವನದಲ್ಲಿ ನಡೆಯಿತು. ಅರ್ಹ ಸಂತ್ರಸ್ತರಿಗೆ ತಲುಪಿಸುವ ಉದ್ದೇಶದಿಂದ ನೆರೆ ಪೀಡಿತ ಪ್ರದೇಶಗಳಲ್ಲಿನ ಎಸ್ ಕೆ ಎಸ್ ಎಸ್ ಎಫ್ ಘಟಕದ ಕಾರ್ಯಕರ್ತರ ಮೂಲಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಮಾನವೀಯ ದೃಷ್ಟಿಯಿಂದ ಸಮಾಜ ಸೇವೆ ಸಲ್ಲಿಸಿದ ಎಸ್ ಕೆ ಎಸ್ ಎಸ್ ಎಫ್ ಇದರ ಸನ್ನದ್ಧ ವಿಭಾಗವಾದ ವಿಖಾಯ ಕಾರ್ಯಕರ್ತರಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ತಮ್ಲೀಕ್ ದಾರಿಮಿ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕೊಡಗು ಜಿಲ್ಲಾ ಉಪ ಖಾಝಿ ಶೈಖುನಾ ಅಬ್ದುಲ್ಲ ಫೈಝಿ ಉಸ್ತಾದ್ ಉಪದೇಶವನ್ನು ನೀಡುತ್ತಾ, ಸಮಾನತೆಯ ಸಮಾಜ ನಿರ್ಮಾಣ ಹಾಗೂ ದಾನ ಧರ್ಮವೇ ಪ್ರಧಾನ ಎಂಬುವುದನ್ನು ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಇಸ್ಲಾಮ್ ಧರ್ಮದಲ್ಲಿ ಸಮಾಜ ಸೇವೆಗೆ ನೀಡಿರುವ ಮಹತ್ವದ ಬಗ್ಗೆ ನೆನಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಆರಿಫ್ ಫೈಝಿ, ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಸಮಿತಿಯ ಸಮಾಜಮುಖಿ ಕಾರ್ಯವೈಖರಿಗಳ ಬಗ್ಗೆ ಮೆಲುಕು ಹಾಕುತ್ತಾ, ಕೋವಿಡ್-19 ಸಂದರ್ಭದಲ್ಲಿ ‘ಮರಳಿ ಗೂಡಿಗೆ ಸಾಂತ್ವನ ‘ ಎಂಬ ಕಾರ್ಯಕ್ರಮದಡಿಯಲ್ಲಿ ಸೌದಿ ಹಾಗೂ ಯುಎಇ ದೇಶಗಳಿಂದ ಅನಿವಾಸಿ ಕನ್ನಡಿಗರಿಗೆ ವಿಮಾನಯಾನ ಸೇವೆಯನ್ನು ಒದಗಿಸಿದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಮರ್ ಫೈಝಿ, ಉಸ್ಮಾನ್ ಹಾಜಿ ಸಿದ್ದಾಪುರ, ಅಬ್ದುಸ್ಸಲಾಂ ಫೈಝಿ ಎಡಪ್ಪಾಲ ಹಾಗೂ ಹಲವು ಧಾರ್ಮಿಕ ಗುರುಗಳು ಮತ್ತು ಮುಖಂಡರುಗಳು ಭಾಗವಹಿಸಿದ್ದರು.ಝೂಮ್ ಆನ್ಲೈನ್ ಮೂಲಕ ಕಾರ್ಯಕ್ರಮವನ್ನು ಜಿಸಿಸಿ ಸಮಿತಿಯ ನಾಯಕರುಗಳು ಹಾಗೂ ಸದಸ್ಯರುಗಳು ವೀಕ್ಷಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಉಪಾಧ್ಯಕ್ಷರಾದ ಅಶ್ರಫ್ ಮಿಸ್ಬಾಹಿ ವಂದಿಸಿದರು.

