ಕುಶಾಲನಗರದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ : ಅರಿಶಿಣ ಗಣೇಶ ಮೂರ್ತಿ ಸ್ಥಾಪಿಸಲು ಜನಜಾಗೃತಿ

21/08/2020

ಮಡಿಕೇರಿ ಆ. 21 : ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಕುಶಾಲನಗರ ಪಟ್ಟಣ ಪಂಚಾಯ್ತಿ ಕಾರ್ಯಾಲಯ ಹಾಗೂ ವಿವಿಧ ಶಾಲೆಗಳ ಇಕೋ ಕ್ಲಬ್ ಗಳ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಕಾರು ನಿಲ್ದಾಣದಲ್ಲಿ ಕೋವಿಡ್ -19 ರ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಹಾಗೂ ಆರೋಗ್ಯ ಸ್ನೇಹಿ ಅರಿಶಿಣ ಗಣೇಶೋತ್ಸವ ಆಚರಣೆ ಕುರಿತು ಜನಜಾಗೃತಿ ಆಂದೋಲನ ನಡೆಯಿತು.
ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ, ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲರೂ ಪರಿಸರ ಸ್ನೇಹಿ ಹಾಗೂ ರೋಗ ನಿರೋಧಕ ಆರೋಗ್ಯ ಶಕ್ತಿ ಹೊಂದಿರುವ ಅರಿಶಿಣ ಗಣೇಶ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಗಣೇಶೋತ್ಸವ ಆಚರಿಸುವಂತೆ ಮನವಿ ಮಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ವೈರಾಣು ನಿರೋಧಕ ಶಕ್ತಿ ಹೊಂದಿರುವ ಸಗಣಿ ಮತ್ತು ಅರಿಶಿಣವನ್ನು ಗೋಧಿ ಅಥವಾ ರಾಗಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ ಗಣೇಶ ಪ್ರತಿಮೆಗಳನ್ನು ತಯಾರಿಸುವ ಮೂಲಕ ಜಲಮಾಲಿನ್ಯ ತಡೆಗಟ್ಟಿ ಸ್ವಚ್ಛ ಮತ್ತು ಹಸಿರು ಪರಿಸರ ಸಂರಕ್ಷಣೆಗೆ ಎಲ್ಲರೂ ಕಂಕಣಬದ್ಧರಾಗಬೇಕು ಎಂದು ಪ್ರೇಮಕುಮಾರ್ ಸಲಹೆ ನೀಡಿದರು.
ಈ ಬಾರಿ ಸರ್ಕಾರ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ನೀಡಿರುವ ಮಾರ್ಗಸೂಚಿಯನ್ವಯ ಎಲ್ಲರೂ ಈ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಬೇಕಿದೆ ಎಂದರು.
ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಮಾಹಿತಿ ಪತ್ರ ಬಿಡುಗಡೆಗೊಳಿಸಿದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎ.ಇ.ಮೊಹಿದ್ದೀನ್, ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬಾಲಗಂಗಾಧರ್ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ಉತ್ಸವ ಇಂದು ಜನಪ್ರಿಯವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ಗಣೇಶೋತ್ಸವದ ಬದಲಿಗೆ ಮನೆಯಲ್ಲೇ ಈ ಆಚರಣೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮನ್ನು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಕರೆ ನೀಡಿದರು.
ಕುಶಾಲನಗರ ಪಟ್ಟಣ ಪಂಚಾಯ್ತಿಯ ಆರೋಗ್ಯಾಧಿಕಾರಿ ಎಂ.ಸಿ.ಉದಯ್ ಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿಯು ಲೆವಿಷ್ಠಾ ಕಾಫಿ ಕಂಪನಿಯ ಸಹಯೋಗದೊಂದಿಗೆ ಹೊರತಂದಿರುವ ಆರೋಗ್ಯ ಸ್ನೇಹಿ ಅರಿಶಿಣ ಗಣೇಶೋತ್ಸವ ಆಚರಣೆ ಕುರಿತ ಸ್ಟಿಕರ್ ಬಿಡುಗಡೆಗೊಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್.ವೆಂಕಟನಾಯಕ್, ಜಿಲ್ಲೆಯಲ್ಲಿ ವಿಜ್ಞಾನ ಪರಿಷತ್ತು ವತಿಯಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಳೆದ 8 ವರ್ಷಗಳಿಂದ ಪರಿಸರ ಸ್ನೇಹಿ ಗಣೇಶೋತ್ಸವ, ಪರಿಸರ ಸ್ನೇಹಿ ದೀಪಾವಳಿ ಆಚರಣೆ ಸೇರಿದಂತೆ ಜಿಲ್ಲೆಯಲ್ಲಿ ವೈವಿಧ್ಯಮಯ ರೀತಿಯಲ್ಲಿ ಪರಿಸರ ಪೂರಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.
ಪರಿಸರ ಕಾರ್ಯಕರ್ತ ತೊರೆನೂರು ಟಿ.ವಿ.ಸಾಗರ್ ತಯಾರಿಸಿದ ಅರಿಶಿಣ ಮತ್ತು ಮಣ್ಣಿನಿಂದ ಗಣೇಶ ಮೂರ್ತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ಪರಿಸರ ಕಾರ್ಯಕರ್ತ ಟಿ.ವಿ.ಸಾಗರ್ ತೊರೆನೂರು, ಕಾರು ಮಾಲೀಕರು ಮತ್ತು ಚಾಲಕರ ಸಂಘದ ಕಾರ್ಯದರ್ಶಿ ರಾಘವೇಂದ್ರ, ಕೋಶಾಧಿಕಾರಿ ಪದ್ಮಪ್ಪ ಪೂಜಾರಿ, ಪದಾಧಿಕಾರಿಗಳು, ಕಾರು ಮತ್ತು ರಿಕ್ಷಾ ಚಾಲಕರು ಇದ್ದರು.