ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 100ರಷ್ಟು ಅಂಕ ಪಡೆಯಲು ಕಾರಣಕರ್ತರಾದ ಶಿಕ್ಷಕರಿಗೆ ಸನ್ಮಾನ

ಮಡಿಕೇರಿ ಆ. 21 : ಶಿಕ್ಷಣ ಇಲಾಖೆ ವತಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ಮಡಿಕೇರಿ ತಾಲ್ಲೂಕಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿ ನಡೆದ ಮಡಿಕೇರಿ ತಾಲ್ಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ತಾಲ್ಲೂಕಿನ ಎಂಟು ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸರಕಾರಿ ಶಾಲೆಗಳ ವಿಭಾಗದಲ್ಲಿ ಮಕ್ಕಂದೂರು ಸರ್ಕಾರಿ ಪ್ರೌಢಶಾಲೆ, ಗಾಳಿಬೀಡು ಸರಕಾರಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಚೇರಂಬಾಣೆಯ ರಾಜರಾಜೇಶ್ವರಿ ಪ್ರೌಢಶಾಲೆ, ಮಡಿಕೇರಿಯ ರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆ, ಕೋರಂಗಾಲ ಜ್ಞಾನೋದಯ ಪ್ರೌಢಶಾಲೆ, ಸಿದ್ದಾಪುರದ ಶ್ರೀಕೃಷ್ಣ ವಿದ್ಯಾಮಂದಿರ, ಇಕ್ರಾ ಪಬ್ಲಿಕ್ ಶಾಲೆ ಮತ್ತು ಸೇಂಟ್ ಆಯನ್ಸ್ ಪ್ರೌಢಶಾಲೆ ಶೇ. 100ರಷ್ಟು ಫಲಿತಾಂಶ ಪಡೆದಿದೆ.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ. ಎಸ್. ಮಚ್ಚಡೋ, ಉಪನಿರ್ದೇಶಕರು ಆಡಳಿತ ವಿಭಾಗದ ಶ್ರೀಧರನ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಭಾಗವಹಿಸಿದ್ದರು.
