ಬೆಟ್ಟ ಕುಸಿದು ಮೃತಪಟ್ಟವರಿಗೆ ಹಿಂದೂ ಸಂಘಟನೆಗಳಿಂದ ಶ್ರದ್ಧಾಂಜಲಿ : ಜಗದೀಶ್ ಕಾರಂತ್ ಭೇಟಿ

24/08/2020

ಮಡಿಕೇರಿ ಆ. 24 : ತಲಕಾವೇರಿಯಲ್ಲಿ ಬೆಟ್ಟ ಕುಸಿದು ಮೃತರಾದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಪತ್ನಿ ಶಾಂತ ಹಾಗೂ ಸೋದರ ಆನಂದತೀರ್ಥರ ಆತ್ಮಕ್ಕೆ ಶಾಂತಿ ಕೋರಿ ಭಾಗಮಂಡಲದ ಶಾಂತಿ ಮಟ್ಟದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.
ಸ್ಥಳೀಯ ಕಾಶಿ ಮಠದಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ಶಾಸಕ ಕೆ.ಜಿ.ಬೋಪಯ್ಯ, ನಾರಾಯಣ ಆಚಾರ್ ಅವರ ಪುತ್ರಿಯರು, ಹಿಂದೂ ಸಂಘಟನೆಗಳ ಪ್ರಮುಖರು ಹಾಜರಿದ್ದು ಮೃತರಿಗೆ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಜಗದೀಶ್ ಕಾರಂತ್ ಅವರು ತಲಕಾವೇರಿಯಲ್ಲಿ ನಾರಾಯಣ ಆಚಾರ್ ಅವರು ನೀಡಿದ ನಿರಂತರ ಸೇವೆಯನ್ನು ಶ್ಲಾಘಿಸಿದರು. ಸಮಾಜಮುಖಿ ಕಾರ್ಯ ಮತ್ತು ಸಂಘ ಪರಿವಾರದ ಸಂಘಟನೆಯನ್ನು ಕೊಡಗಿನಲ್ಲಿ ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದರು.
ವೇದಿಕೆಯ ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಜೀವನ್, ಕೊಡಗು ಸಂಘಟನಾ ಕಾರ್ಯದರ್ಶಿ ಬಿ.ಬಿ.ಮಹೇಶ್, ದಿನೇಶ್ ಕುಮಾರ್, ಜಾಲಿ ಪೂವಪ್ಪ, ಜಿಲ್ಲಾ ಸಂಘ ಚಾಲಕ್ ಚಕ್ಕೆರೆ ಮನುಕಾವೇರಪ್ಪ, ಬಿಜೆಪಿ ಪ್ರಮುಖ ಕೋಡಿ ಪೊನ್ನಪ್ಪ, ಡಾ.ಕೋಳಿಬೈಲು ಕುಶ್ವಂತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದ ಹಾಗೂ ನಮಿತ ಅವರುಗಳು ಘಟನೆಯ ಕುರಿತು ಜಗದೀಶ್ ಕಾರಂತ್ ಅವರೊಂದಿಗೆ ಚರ್ಚಿಸಿದರು. ತಾಯಿ ಶಾಂತ ಅವರ ಮೃತದೇಹ ಇನ್ನೂ ಕೂಡ ಪತ್ತೆಯಾಗದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಂತರ ಬೆಟ್ಟ ಕುಸಿದ ಪ್ರದೇಶಕ್ಕೆ ಜಗದೀಶ್ ಕಾರಂತ್ ಅವರು ಭೇಟಿ ನೀಡಿ ಪರಿಶೀಲಿಸಿದರು.