ದಿ. ಎ.ಕೆ. ಸುಬ್ಬಯ್ಯನವರ ಮೊದಲ ವರ್ಷದ ಪುಣ್ಯಸ್ಮರಣೆ : ಆ. 25ರಂದು ವೆಬಿನಾರ್ ಮೂಲಕ ನುಡಿನಮನ

24/08/2020

ಮಡಿಕೇರಿ ಆ. 24 : ಕನ್ನಡನಾಡು ಕಂಡ ಅಪರೂಪದ ರಾಜಕೀಯ ಮುತ್ಸದಿ ಎ.ಕೆ. ಸುಬ್ಬಯ್ಯನವರು ನಿಧನರಾಗಿ ಇದೇ ಆ. 27ಕ್ಕೆ ಒಂದು ವರ್ಷವಾಗುತ್ತದೆ. ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇದೇ ತಿಂಗಳ 25ರಂದು ವೆಬಿನಾರ್ ಮೂಲಕ ‘ನುಡಿ ನಮನ’ ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕೊಡಗಿನ ಸುಪುತ್ರರಾದ ಎ.ಕೆ. ಸುಬ್ಬಯ್ಯನವರು ಪ್ರಾಮಾಣಿಕ-ನಿಷ್ಠುರ ರಾಜಕಾರಣಿ. ಆದರ್ಶದ ಬದುಕಿಗೊಂದು ಮಾದರಿ. ಮಾತಿಗೂ, ಬದುಕಿಗೂ ಅಂತರವೇ ಇಲ್ಲದ ಕನ್ನಡಿಯ ವ್ಯಕ್ತಿತ್ವದವರು. ಕೆಲ ಮಾಜಿ ಮುಖ್ಯಮಂತ್ರಿಗಳನ್ನೂ ಒಳಗೊಂಡಂತೆ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದವರು. ಅಪ್ಪಟ ವಿಚಾರವಾದಿ-ಜಾತ್ಯಾತೀತ ಜೀವಿ. ನೊಂದವರ ಕಂಡು ಕರಗಿ ಬಿಡುವ ಮಾನವೀಯ ವ್ಯಕ್ತಿತ್ವದವರು. ಎಂದಿಗೂ ರಾಜಿಯಾಗದ ದಿಟ್ಟ ಹೋರಾಟಗಾರ. ಶೋಷಿತರ ಮತ್ತು ದಮನಿತ ಪರವಾದ ಗಟ್ಟಿ ಧ್ವನಿಯಾಗಿದ್ದವರು. ವೈರಿಗಳು ಕೂಡ ಮೆಚ್ಚುವ ವ್ಯಕ್ತಿತ್ವದವರು. ತಮ್ಮ ತೀವ್ರ ಅನಾರೋಗ್ಯದ ಕೊನೆಯ ದಿನಗಳಲ್ಲಿ ಕೂಡ ನೊಂದವರ ಪರವಾದ ಚಳವಳಿಗಳಲ್ಲಿ ತೊಡಗಿಕೊಂಡಿದ್ದವರು.
ಅವರ ಬದುಕು ಸಮಾಜಕ್ಕೆ ಆದರ್ಶವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಆ. 25ರಂದು ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಏರ್ಪಡಿಸಲಾಗಿದೆ.

ವೆಬಿನಾರ್ ನಲ್ಲಿ ರಾಷ್ಟ್ರೀಯ ಖ್ಯಾತಿಯ ಮಾನವಹಕ್ಕು ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್, ವಿಧಾನಸಭೆಯ ಮಾಜಿ ಅಧ್ಯಕ್ಷರು ಮತ್ತು ಶಾಸಕ ಕೆ.ಆರ್. ರಮೇಶ್ ಕುಮಾರ್, ರಾಜ್ಯ ಸರಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ಮಾಜಿ ಸಚಿವರು ಮತ್ತು ಮಂಗಳೂರು ಶಾಸಕ ಯು.ಟಿ. ಖಾದರ್, ಪ್ರಸಿದ್ಧ ಸಂಸ್ಕೃತಿ ಚಿಂತಕ ರಹಮತ್ ತರಿಕೆರೆ, ಜನಪದ ಹೋರಾಟಗಾರ ನೂರ್ ಶ್ರೀಧರ್ ಮೊದಲಾದವರು ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಲಿದ್ದಾರೆ.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಮುಖ್ಯಸ್ಥರಾದ ಕೆ. ಎಲ್. ಅಶೋಕ್, ಕೊಡಗಿನ ಜನಪದ ಹೋರಾಟಗಾರರಾದ ವಿ.ಪಿ. ಶಶಿಧರ್, ಮಡಿಕೇರಿಯ ವಕೀಲರಾದ ಕೆ.ಆರ್. ವಿದ್ಯಾಧರ್ ಅವರು ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.