ಬಿಜೆಪಿ ಗ್ರಾಮ ಶಕ್ತಿ ಕೇಂದ್ರ ದ ಪ್ರಮುಖ್ ಆಗಿ ಪಿ. ದಿನೇಶ್ ಮತ್ತು ಸಹ ಪ್ರಮುಖ್ ಆಗಿ ದಿಲನ್ ಬೋಪಣ್ಣ ಆಯ್ಕೆ

24/08/2020

ಮಡಿಕೇರಿ ಆ. 24 : ಭಾರತೀಯ ಜನತಾ ಪಕ್ಷದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ, ವಿ.ಬಾಡಗ ಮತ್ತು ನಾoಗಾಲ ‘ಗ್ರಾಮ ಶಕ್ತಿ ಕೇಂದ್ರ’ದ ಪ್ರಮುಖ್ ಆಗಿ ಅಪ್ಪಂಡೇರಂಡ ಪಿ. ದಿನೇಶ್ ಮತ್ತು ಸಹ ಪ್ರಮುಖ್ ಆಗಿ ಕುಪ್ಪಂಡ ದಿಲನ್ ಬೋಪಣ್ಣ ಆಯ್ಕೆಯಾಗಿದ್ದಾರೆ.

ಬಿಟ್ಟಂಗಾಲ ಸಮೀಪದ ರುದ್ರಗುಪ್ಪೆಯಲ್ಲಿ ವಿರಾಜಪೇಟೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ನೆಲ್ಲೀರ ಚಲನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಅವಿರೋಧ ಆಯ್ಕೆ ನಡೆಯಿತು.

ಪಕ್ಷ ಸಂಘಟನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಜನಪರವಾಗಿ ಕಾರ್ಯನಿರ್ವಹಿಸುವಂತೆ ನೂತನವಾಗಿ ಆಯ್ಕೆಗೊಂಡ ಪ್ರಮುಖ್ ಮತ್ತು ಸಹ ಪ್ರಮುಖ್ ಗಳಿಗೆ ಪಕ್ಷದ ಪ್ರಮುಖರು ಕಿವಿಮಾತು ಹೇಳಿದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯತಿ ಸದಸ್ಯರಾದ ಭವ್ಯ ಚಿಟ್ಯಣ್ಣ, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಚೆಪ್ಪುಡಿರ ಮಾಚಯ್ಯ, ವಿರಾಜಪೇಟೆ ತಾಲೂಕು ಮಂಡಲ ಸಮಿತಿಯ ಉಪಾಧ್ಯಕ್ಷರಾದ ಗಿರೀಶ್, ಪ್ರಧಾನ ಕಾರ್ಯದರ್ಶಿಗಳಾದ ಅಜ್ಜಿಕುಟ್ಟೀರ ಪ್ರವೀಣ್, ವಾಟೇರಿರ ಬೋಪಣ್ಣ, ವಿರಾಜಪೇಟೆ ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ, ವಿರಾಜಪೇಟೆ ತಾಲ್ಲೂಕು ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ರಾಜೇಶ್, ಪಕ್ಷದ ಹಿಂದಿನ ಬಿಟ್ಟಂಗಾಲ ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.