ಕೋಟೆ ಅರಮನೆ ಕಾಮಗಾರಿ : ಸೇವಾ ಶುಲ್ಕ ವಿಧಿಸದಂತೆ ಹೈಕೋರ್ಟ್ ಆದೇಶ

24/08/2020

ಮಡಿಕೇರಿ ಆ.24 : ನಗರದ ಕೋಟೆ ಅರಮನೆ ಅಭಿವೃದ್ಧಿ ಕಾಮಗಾರಿ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಸೋಮವಾರ ರಾಜ್ಯ ಉಚ್ಛ ನ್ಯಾಯಾಲಯದ ಮಾನ್ಯ ನ್ಯಾಯಮೂರ್ತಿ ಅಭಯ್ ಓಕ್ ಇವರ ನ್ಯಾಯಪೀಠದ ಮುಂದೆ ನಡೆಯಿತು.
ಕರ್ನಾಟಕ ಉಚ್ಛ ನ್ಯಾಯಾಲಯ ಇದೇ ಪ್ರಕರಣದಲ್ಲಿ ನೀಡಿದ್ದ ನಿರ್ದೇಶನದಂತೆ ರಾಜ್ಯ ಸರ್ಕಾರ 10.70 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಈ ಕಾಮಗಾರಿಗೆ ಶೇ.23 ರ ಸೇವಾ ಶುಲ್ಕ ವಿಧಿಸುವುದರಿಂದ ಅಂದಾಜು 2.7 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ನಷ್ಟವಾಗುವುದರಿಂದ ಮತ್ತು ಈ ಅರಮನೆ ಸಂರಕ್ಷಿತ ಸ್ಮಾರಕವಾದ್ದರಿಂದ, ಇದರ ನಿರ್ವಹಣೆ ಪ್ರಾಚ್ಯ ವಸ್ತು ಇಲಾಖೆಯ ಜವಾಬ್ದಾರಿ ಎಂದು ಈ ಸೇವಾ ಶುಲ್ಕ ವಿಧಿಸುವುದನ್ನು ನಿರ್ಬಂಧಿಸಬೇಕು ಎಂದು ವಕೀಲ ರವೀಂದ್ರನಾಥ ಕಾಮತ್ ಅವರು ವಾದ ಮಂಡಿಸಿದರು.
ಈ ಬಗ್ಗೆ ಇಂದು ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಅಭಯ್ ಓಕ್ ಅವರ ನೇತೃತ್ವದ ವಿಭಾಗೀಯ ಪೀಠ ಪ್ರಾಚೀನ ಸಂರಕ್ಷಿತ ಸ್ಮಾರಕ ರಕ್ಷಿಸಬೇಕಾದ ಹೊಣೆ ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ್ದು, ಆದ್ದರಿಂದ ಶೇ.23ರ ಸೇವಾ ಶುಲ್ಕ ವಿಧಿಸಬಾರದೆಂದು ನಿರ್ದೇಶನ ನೀಡಿದೆ.
ಅರಮನೆ ದುರಸ್ತಿ ಕಾಮಗಾರಿ ಸಮರ್ಪಕತೆ ಬಗ್ಗೆ ಜಿಲ್ಲಾಧಿಕಾರಿ ಅವರು ಉಪ ವಿಭಾಗಾಧಿಕಾರಿ ಸರಿಸಮನಾದ ಅಧಿಕಾರಿಯನ್ನು ನೇಮಿಸಿ ಕಾಮಗಾರಿ ಸಮರ್ಪಕ ನಿರ್ವಹಣೆ ಬಗ್ಗೆ ಕಾಲ ಕಾಲಕ್ಕೆ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಇದೇ ಸಂದರ್ಭದಲ್ಲಿ ನ್ಯಾಯಪೀಠ ನಿರ್ದೇಶಿಸಿದೆ ಎಂದು ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತರಾದ ವಿರೂಪಾಕ್ಷಯ್ಯ ಅವರು ತಿಳಿಸಿದ್ದಾರೆ.