ತಲಕಾವೇರಿ ಕ್ಷೇತ್ರದಲ್ಲಿ ಮೂಲ ಪೌರೋಹಿತ್ಯರಾಗಿದ್ದ ಅಮ್ಮಕೊಡವರಿಗೆ ಅವಕಾಶ ಕಲ್ಪಿಸುವ ಬೇಡಿಕೆಗೆ ಪೊನ್ನಂಪೇಟೆ ಕೊಡವ ಸಮಾಜ ಬೆಂಬಲ

24/08/2020

ಮಡಿಕೇರಿ ಆ. 24 : ಕೊಡಗಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರದಲ್ಲಿ ಈ ಹಿಂದಿನಂತೆ ಅಮ್ಮಕೊಡವ ಜನಾಂಗ ಈ ಕ್ಷೇತ್ರದಲ್ಲಿ ಪೌರೋಹಿತ್ಯ ಸೇವೆ ಸಲ್ಲಿಸಲು ಹಕ್ಕು ಪ್ರತಿಪಾಡಿಸಿರುವುದನ್ನು ಪೊನ್ನಂಪೇಟೆ ಕೊಡವ ಸಮಾಜ ಸ್ವಾಗತಿಸುತ್ತದೆ ಹಾಗೂ ಈ ನಿಟ್ಟಿನಲ್ಲಿ ಅಮ್ಮಕೊಡವ ಸಮಾಜಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಕ್‍ಮಾಡ ರಾಜೀವ್ ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಸಮಾಜದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕ್ಷೇತ್ರದಲ್ಲಿ ತಡವಾಗಿ ಆದರೂ ಮೂಲ ಪೌರೋಹಿತ್ಯರಾಗಿದ್ದ ಅಮ್ಮಕೊಡವ ಸಮಾಜದವರು ಪೌರೋಹಿತ್ಯ ಸೇವೆಯನ್ನು ನಡೆಸಲು ಮುಂದಾಗಿರುವ ಬೆಳವಣಿಗೆ ಸ್ವಾಗತಾರ್ಹವಾಗಿದ್ದು, ನಾನಾ ಕಾರಣದಿಂದ ಮೂಲ ಅರ್ಚಕರಾಗಿದ್ದ ಅಮ್ಮಕೊಡವರಿಗೆ ಈ ಕ್ಷೇತ್ರದಲ್ಲಿ ಪೌರೋಹಿತ್ಯ ನೀಡುವುದು ಸಮರ್ಥನೀಯವಾಗಿದೆ ಎಂದು ಹೇಳಿದರು.

ಈ ಹಿಂದೆ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮದಲ್ಲಿ ತಕ್ಕಾಮೆಯ ಬಗ್ಗೆ ಹಾಗೂ ಈ ಅಮ್ಮಕೊಡವರ ಪೌರೋಹಿತ್ಯದ ಬಗ್ಗೆ ಪ್ರಸ್ತಾಪವಾಗಿದ್ದು, ಇದೀಗ ಇಲ್ಲಿ ಪೂಜೆ ನಡೆಸುತ್ತಿದ್ದ ಅರ್ಚಕ ಸಮುದಾಯದ ಕುಟುಂಬವೇ ಪ್ರಾಕೃತಿಕ ವಿಕೋಪಕ್ಕೆ ಅಳಿದು ಹೋಗಿರುವ ಕಾರಣ ಬದಲಿ ವ್ಯವಸ್ಥೆ ಮಾಡಲೇ ಬೇಕಾಗಿದೆ. ಆದರೆ ಬದಲಿ ವ್ಯವಸ್ಥೆ ಮಾಡಿ ಮತ್ತೊಮ್ಮೆ ಅಪಚಾರ ಮಾಡುವುದಕ್ಕಿಂತ ಈ ಹಿಂದೆ ಇಲ್ಲಿ ಮೂಲ ಅರ್ಚಕರಾಗಿ ಪೂಜೆ ವಿಧಿವಿಧಾನವನ್ನು ನಡೆಸುತ್ತಿದ್ದ ಅಮ್ಮಕೊಡವರಿಗೆ ನೀಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.

ಇದ್ದರಿಂದ ಅಷ್ಟಮಂಗಲ ಪ್ರಶ್ನೆಯಲ್ಲಿ ಕೇಳಿ ಬಂದ ಅಗಸ್ತ್ಯ ಮುನಿಯ ಕೋಪ, ಕಾವೇರಮ್ಮೆಯ ಶಾಪ ಪರಿಹಾರವಾಗುತ್ತದೆ. ಹಾಗೇಯೇ ಇಲ್ಲಿ ಈ ಹಿಂದೆ ಮಂಡೀರ, ಮಣವಟ್ಟೀರ ಮತ್ತು ಪಟ್ಟಮಾಡ ಕುಟುಂಬಗಳ ತಕ್ಕಾಮೆಯ ವಿಷಯ ಕೂಡ ಅಷ್ಟಮಂಗಲ ಕಾರ್ಯದಲ್ಲಿ ಪ್ರಸ್ತಾಪವಾಗಿದ್ದು, ಇದನ್ನು ಕೂಡ ಗಂಭೀರವಾಗಿ ಪರಿಗಣನೆ ತೆಗೆದುಕೊಂಡು ಈ ಕುಟುಂಬದವರನ್ನು ಸಹ ಮುಂದಿಟ್ಟುಕೊಂಡು ಪೂಜಾ ಕಾರ್ಯ, ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕಾಗಿದೆ ಎಂದು ಹೇಳಿದರು.

ಸಮಾಜದ ಗೌರವ ಕಾರ್ಯದರ್ಶಿ ಪೆÇನ್ನಿಮಾಡ ಸುರೇಶ್ ಅವರು ಮಾತನಾಡಿ, ಇದೀಗ ಈ ಕ್ಷೇತ್ರದಲ್ಲಿ ಪುರೋಹಿತ ಕುಟುಂಬ ಮರಣ ಹೊಂದಿದ್ದು, ಈ ಸಂದರ್ಭ ಇನ್ನೊಬ್ಬರಿಗೆ ಕೊಡುವ ಬದಲು ಈ ಹಿಂದೆ ಇಲ್ಲಿ ಪೂಜಾ ಕಾರ್ಯವನ್ನು ನೆರವೇರಿಸುತ್ತಿದ್ದ, ಮೂಲ ಪೌರೋಹಿತ್ಯರಾಗಿದ್ದ ಅಮ್ಮಕೊಡವ ಜನಾಂಗಕ್ಕೆ ಪೂಜಾ ವಿಧಿವಿಧಾನ, ಧಾರ್ಮಿಕ ಕಾರ್ಯ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.

ಸಮಾಜದ ಖಜಾಂಚಿ ಮೂಕಳೇರ ಲಕ್ಷ್ಮಣ್ ಅವರು ಮಾತನಾಡಿ ಇತಿಹಾಸ ಮರುಕಳಿಸುತ್ತಾ ಇರುತ್ತದೆ. ಅಯೋಧ್ಯೆಯಲ್ಲಿ ಹೇಗೆ ಈ ಹಿಂದಿನ ಇತಿಹಾಸದಂತೆ ರಾಮ ಮಂದಿರ ನಿರ್ಮಾಣವಾಗುತ್ತಿದೆಯೋ ಹಾಗೇಯೇ ತಲಕಾವೇರಿ-ಭಾಗಮಂಡಲ ಧಾರ್ಮಿಕ ಕ್ಷೇತ್ರದಲ್ಲಿ ಈ ಹಿಂದಿನ ಕಟ್ಟುಪಾಡು ಹಾಗೂ ಪರಂಪರೆ ಮುಂದುವರೆಯಬೇಕು. ಇದರಿಂದ ಕೊಡಗಿಗೂ ಹಾಗೂ ನಾಡಿಗೂ ಒಳಿತಾಗಲಿದೆ ಎಂದು ಹೇಳಿದರು.

ಈ ಸಂದರ್ಭ ಕೊಡವ ಸಮಾಜದ ಉಪಾಧ್ಯಕ್ಷ ಚೆಪ್ಪುಡೀರ ಬೋಪಣ್ಣ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.