ಆ.27 ರಂದು ‘ಎ.ಕೆ.ಸುಬ್ಬಯ್ಯ ನೆನಪು’ ನುಡಿನಮನ : ಎಕೆಎಸ್ ಪ್ರತಿಷ್ಠಾನದಿಂದ ‘ರಾಜ್ಯ ಮಟ್ಟದ ಪ್ರಶಸ್ತಿ’ ಸ್ಥಾಪನೆ

ಮಡಿಕೇರಿ ಆ.24 : ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆ.27 ರಂದು ‘ಎ.ಕೆ.ಸುಬ್ಬಯ್ಯ ನೆನಪು’ ನುಡಿ ನಮನ ಕಾರ್ಯಕ್ರಮ ನಗರದಲ್ಲಿ ನಡೆಯಲಿದೆ ಎಂದು ಎ.ಕೆ.ಸುಬ್ಬಯ್ಯ ಅಭಿಮಾನಿ ಬಳಗದ ಪ್ರಮುಖರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪ್ರಮುಖ ಹಾಗೂ ಜಿ.ಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಆದರ್ಶದ ಬದುಕಿಗೊಂದು ಮಾದರಿಯಾಗಿದ್ದ ಎ.ಕೆ.ಸುಬ್ಬಯ್ಯ ಅವರು ಜಾತ್ಯತೀತ ನಿಲುವಿನೊಂದಿಗೆ ಹೋರಾಟಗಳನ್ನು ರೂಪಿಸಿ ಯಶಸ್ವಿಯಾದವರು ಎಂದು ಶ್ಲಾಘಿಸಿದರು.
ಶೋಷಿತರ ಮತ್ತು ದಮನಿತರ ಪರವಾದ ಗಟ್ಟಿ ಧ್ವನಿಯಾಗಿದ್ದ ಎ.ಕೆ. ಸುಬ್ಬಯ್ಯ ಅವರು ಕಳೆದ 2019ರ ಆ.27 ರಂದು ನಮ್ಮನ್ನಗಲಿದ್ದರು. ಇದೀಗ ಅವರು ನಿಧನರಾಗಿ ಒಂದು ವರ್ಷ ಪೂರೈಸುತ್ತಿದ್ದು, ಎ.ಕೆ.ಸುಬ್ಬಯ್ಯನವರ ತತ್ತ್ವಾದರ್ಶಗಳನ್ನು ಒಪ್ಪಿಕೊಂಡವರು, ಅವರೊಂದಿಗೆ ಒಡನಾಡಿದವರು ಒಗ್ಗೂಡಿ ‘ಎ.ಕೆ.ಸುಬ್ಬಯ್ಯ ಪ್ರತಿಷ್ಠಾನ’ವನ್ನು ಅಸ್ತಿತ್ವಕ್ಕೆ ತರುತ್ತಿದ್ದು, ಅದರ ಮೂಲಕ ವರ್ಷಂಪ್ರತಿ ಸ್ಮರಣೆ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಎಕೆಎಸ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಇದೇ ಆ.27 ರಂದು ಬೆಳಗ್ಗೆ 11 ಗಂಟೆಗೆ ‘ನುಡಿ ನಮನ’ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕೋಮು ಸೌಹಾರ್ದ ವೇದಿಕೆಯ ಪ್ರಮುಖ ಕೆ.ಎನ್.ಅಶೋಕ್, ಜನಪರ ಹೋರಾಟಗಾರ ಡಾ.ಹೆಚ್.ವಿ.ವಾಸು ಹಾಗೂ ಸ್ಥಳೀಯರಾದ ಚೆಕ್ಕೇರ ಸೋಮಯ್ಯ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶಶಿಧರ್ ಮಾಹಿತಿ ನೀಡಿದರು.
ಮಧ್ಯಾಹ್ನ 12 ಗಂಟೆಗೆ ‘ಪ್ರಸಕ್ತ ಭಾರತದ ಪ್ರಜಾಸತ್ತೆಯ ಸವಾಲುಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ವಿಚಾರವಾದಿ ಡಾ.ಶಿವಸುಂದರ ವಿಚಾರ ಮಂಡಿಸಲಿದ್ದಾರೆ.
::: ಪ್ರಶಸ್ತಿ ಸ್ಥಾಪನೆ :::
ಎ.ಕೆ.ಸುಬ್ಬಯ್ಯ ಅವರಿಂದ ಪ್ರೇರಣೆ ಪಡೆದುಕೊಂಡಿರುವ ಅಸಂಖ್ಯಾತÀ ಮಂದಿ ಕೊಡಗು ಸೇರಿದಂತೆ ನಾಡಿನಾದ್ಯಂತ ನೆಲೆಸಿದ್ದಾರೆ. ಜಿಲ್ಲೆಯ ಎಕೆಎಸ್ ಅಭಿಮಾನಿ ಬಳಗದವರೆಲ್ಲರು ರಾಜಕೀಯ ರಹಿತವಾಗಿ ಒಗ್ಗೂಡಿ ಸುಬ್ಬಯ್ಯ ಅವರ ಹೆಸರಿನಲ್ಲಿ ಒಂದು ಪ್ರತಿಷ್ಠಾನವನ್ನು ರಚಿಸಿದ್ದು, ಇದರಲ್ಲಿ 10 ಲಕ್ಷ ರೂ. ಠೇವಣಿಯನ್ನು ಆರಂಭಿಕ ಹಂತದಲ್ಲಿ ಕ್ರೋಢೀಕರಿಸಲಾಗಿದೆ. ಇದರಿಂದ ವಾರ್ಷಿಕವಾಗಿ ದೊರಕುವ ಬಡ್ಡಿಯ ಮೊತ್ತವನ್ನು ಬಳಸಿಕೊಂಡು ಎಕೆಎಸ್ ಕುರಿತ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಎ.ಕೆ.ಸುಬ್ಬಯ್ಯ ಅವರ ಹೆಸರಿನಲ್ಲಿ ‘ರಾಜ್ಯ ಮಟ್ಟದ ಪ್ರಶಸ್ತಿ’ಯನ್ನು ಮುಂದಿನ ವರ್ಷದಿಂದ ಆರಂಭಿಸುತ್ತಿರುವುದಾಗಿ ಹೇಳಿದರು.
ಎ.ಕೆ.ಸುಬ್ಬಯ್ಯ ಅವರ ಆಶಯಗಳಂತೆ ಜಾತ್ಯತೀತವಾದ ನಿಲುವುಗಳಿಗೆ ಬದ್ಧರಾಗಿ, ಸಮಾಜ ಮುಖಿ ಚಿಂತನೆಗಳೊಂದಿಗೆ ಸಮಾಜದ ದಲಿತ, ಶೋಷಿತರ ಪರವಾದ ಹೋರಾಟಗಳನ್ನು ರೂಪಿಸಿಕೊಂಡು ಬರುತ್ತಿರುವವರನ್ನು ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿ ಗೌರವ ಧನ ಮತ್ತು ಸ್ಮರಣಿಕೆಯನ್ನು ಹೊಂದಿರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಪ್ರಮುಖರು ಹಾಗೂ ವಕೀಲರುಗಳಾದ ಕೆ.ಆರ್.ವಿದ್ಯಾಧರ್, ಕುಂಞ ಅಬ್ದುಲ್ಲಾ, ಜಿ.ಪಂ. ಮಾಜಿ ಅಧ್ಯಕ್ಷರಾದ ದೀರ್ಘಕೇಶಿ ಶಿವಣ್ಣ, ಬಿ.ಎನ್.ಮನು ಶೆಣೈ ಹಾಗೂ ತೆನ್ನಿರ ಮೈನಾ, ಉಪಸ್ಥಿತರಿದ್ದರು.
