ಪಠ್ಯದಲ್ಲಿ ಕೌಶಲ್ಯ ತರಬೇತಿ ವಿಷಯ

25/08/2020

ಬೆಂಗಳೂರು ಆ.24 : ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ಪಠ್ಯದಲ್ಲಿಯೇ ಕೌಶಲ್ಯ ತರಬೇತಿ ವಿಷಯವನ್ನು ಸೇರಿಸಲಾಗುತ್ತದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದ ಮಲ್ಲೇಶ್ವರದ ಒಳಾಂಗಣ ಕ್ರೀಡಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ನಾರಾಯಣ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ತೆರೆಯಲಾಗಿರುವ “ಮಲ್ಲೇಶ್ವರಂ ಕೌಶಲ್ಯ ಕೇಂದ್ರ”ದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇವತ್ತು ಕೌಶಲ್ಯವಿರುವುದರ ಜತೆಗೆ, ಆ ಕೌಶಲ್ಯ ಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ನೌಕರಿ ಸಿಗುತ್ತದೆಯೇ ಎಂಬುದು ಬಹಳ ಮುಖ್ಯವಾದ ವಿಚಾರ. ಹೀಗಾಗಿ ಜಾಬ್ ಮಾರುಕಟ್ಟೆಗೆ ತಕ್ಕ ಹಾಗೆ, ಅಂದರೆ ಕೈಗಾರಿಕೆಗಳಿಗೆ ಅಗತ್ಯವಿರುವ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.